ಈಗಾಗಲೇ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಮೂಲಕ ಗಮನಸೆಳೆದಿರುವ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡು ಮತ್ತು ಟ್ರೇಲರ್‌ಗೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿರುವ ಚಿತ್ರವನ್ನು ಸುಮಾರು 70 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಗೋಪಿ ಕೆರೂರು ಅವರಿಗೆ ಇದು ಎರಡನೇ ಸಿನಿಮಾ. ತಮ್ಮ ಚಿತ್ರದ ಬಗ್ಗೆ ಹೇಳುವ ಗೋಪಿ ಕೆರೂರು, “ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಲಾಗಿದೆ. ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ಇಲ್ಲಿ 11 ಹಾಡುಗಳಿದ್ದರೂ, ಎಲ್ಲವೂ ಕಥೆಗೆ ಪೂರಕವಾಗಿವೆ’ ಎನ್ನುತ್ತಾರೆ ಗೋಪಿ ಕೆರೂರು.
ಚಿತ್ರವನ್ನು ನಿರ್ಮಾಪಕ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ನಿರ್ಮಿಸಿದ್ದು, ಅವರಿಗೂ ಇದು ಮೊದಲ ಅನುಭವ. ಅವರಿಗೆ ಚಿತ್ರದ ಶೀರ್ಷಿಕೆ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಕೇಳಿದಾಗಲೇ ಸಖತ್ ಮಜವಾಗಿದೆ ಎಂದೆನಿಸಿ, ನಿರ್ಮಾಣ ಮಾಡೋಕೆ ಮುಂದಾದರಂತೆ. ಈ ಚಿತ್ರಕ್ಕೆ ಶಿವ ಚಂದ್ರಕುಮಾರ್ ಹೀರೋ. ಅವರಿಗೂ ಇದು ಮೊದಲ ಚಿತ್ರ. ಚಿತ್ರದಲ್ಲಿ ಅವರು ಪುಡಾರಿ ಹುಡುಗನ ಪಾತ್ರ ಮಾಡಿದ್ದಾರಂತೆ. ಮದುವೆ ಬಳಿಕ ಅವರು ಸರಿಹೋಗುತ್ತಾರಾ ಅನ್ನುವುದು ಚಿತ್ರದ ಕಥೆಯಂತೆ.
ಚಿತ್ರಕ್ಕೆ ಅವಿನಾಶ್ ಬಾಸೂತ್ಕರ್ ಸಂಗೀತ ನೀಡಿದ್ದು, ಅವರಿಗೂ ಇದು ನಿರ್ದೇಶಕರ ಜೊತೆ ಎರಡನೇ ಚಿತ್ರ. ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳನ್ನು ನೀಡುವ ಮೂಲಕ ಇದೊಂದು ಮ್ಯೂಸಿಕಲ್ ಸಿನಿಮಾ ಆಗಿಸಿರುವ ಖುಷಿ ಅವರದು. ಚಿತ್ರದಲ್ಲಿ ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಕವಾತ್ತರ್, ಚಿತ್ಕಲ ಬಿರಾದಾರ, ಸದಾನಂದ ಕಾಳಿ, ಚಕ್ರವರ್ತಿ ದಾವಣಗೆರೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣವಿದೆ. ವೆಂಕಿ ಸಂಕಲನ ಮಾಡಿದ್ದಾರೆ.