Advertisement

ನೂರನೇ ಹೆಜ್ಜೆಯಲ್ಲಿ ಮದುಮಗಳ ಗುಂಗು

10:00 AM Feb 16, 2020 | Lakshmi GovindaRaj |

ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ…

Advertisement

ಕುವೆಂಪು ಸರ್ವ ಶತಮಾನಗಳಿಗೂ ಸಲ್ಲುವ ಕವಿ. ರಸಋಷಿ ಕಲ್ಪಿತ “ಮಲೆಗಳಲ್ಲಿ ಮದುಮಗಳು’ ರಂಗ ದೃಶ್ಯದಲ್ಲಿ ಅರಳಿ, ಶತಕದ ನಗು ಬೀರುತ್ತಿದೆ. “ಕಾವ್ಯೇಶು ನಾಟಕಂ ರಮ್ಯಂ’ ಎನ್ನುವ ಕಾಳಿದಾಸನ ಮಾತಿನಂತೆ, ಕಾವ್ಯಕ್ಕಿಂತ ನಾಟಕ ಆಸ್ವಾದಿಸುವ ಸುಖವೇ ಒಂದು ರಮ್ಯ ಅನುಭೂತಿ. ಮೂಲ ಕಾದಂಬರಿಯನ್ನು ಕವಿ ಕೆ.ವೈ. ನಾರಾಯಣಸ್ವಾಮಿಯವರು ಅದ್ಭುತವಾಗಿ ರಂಗರೂಪಕ್ಕೆ ಅಳವಡಿಸಿದ್ದಾರೆ.

ಸಿ. ಬಸವಲಿಂಗಯ್ಯ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ರಂಗದ ಮೇಲೆ ತಂದಿರುವುದರ ಹಿಂದೆ ಅಪಾರ ಶ್ರಮ ಕಾಣುತ್ತದೆ. ಹಂಸಲೇಖ ಅವರ ಹಿನ್ನೆಲೆ ಸಂಗೀತ (ನಿರ್ವಹಣೆ ಗಜಾನನ ನಾಯಕ್‌), ನಾಲಕ್ಕು ರಂಗಮಂದಿರಗಳ ರಂಗವಿನ್ಯಾಸದ ಹೊಣೆ ಹೊತ್ತವರು ಶಶಿಧರ ಅಡಪ, ಮಳೆಗಾಲದ ಮಲೆನಾಡಿನ ಜಿಗಣೆ, ಸಗಣಿ ಹುಳು, ಬಸವನ ಹುಳುಗಳನ್ನು ರಂಗದ ಮೇಲೆ ತಂದಿರುವ ಅವರ ಕಲೆ ಅನೂಹ್ಯ.

ಅಹೋರಾತ್ರಿ ನಡೆಯುವ ಈ ರಂಗಪ್ರಯೋಗವನ್ನು ಬೇರೆ ಬೇರೆ ರಂಗಸ್ಥಳಗಳಲ್ಲಿ ಆಯೋಜಿಸಿರುವುದು ಕಲ್ಪನೆಗೂ ನಿಲುಕದ್ದು. ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ. ಹೊಸ ರೂಪವನ್ನು ಕೊಡುವ ಈ ಪಾತ್ರಗಳು ಅವರದೇ ಶೈಲಿಯ ಹಾಡಿನ ಮೂಲಕ ಕಾದಂಬರಿಯನ್ನು ನೋಡುಗರ ಮನಮುಟ್ಟುವಂತೆ ಹೇಳಿರುವುದು ಕವಿಯ ಕಲ್ಪನೆಗೆ ಹತ್ತಿರವಾಗಿದೆ.

ಇನ್ನು ರಂಗದ ಮೇಲೆ ಕಾಣಿಸಿಕೊಳ್ಳುವ ಕಾದಂಬರಿಯ ಪಾತ್ರಗಳು, ಕಾದಂಬರಿ ಓದಿದವರ ಸ್ಮತಿಪಟಲದಲ್ಲಿ ಮೂಡಿದ್ದ ಪಾತ್ರಗಳು ಜೀವ ತುಂಬಿ ಬಂದತೆ ಮೂರ್ತರೂಪವನ್ನು ಕಟ್ಟಿಕೊಡುತ್ತವೆ. ಕಾದಂಬರಿ ಓದಿದವರು ತಮ್ಮ ಕಲ್ಪನೆಯ ನಾಯಿಗುತ್ತಿ, ಚಿನ್ನಮ್ಮ, ದೇವಯ್ಯ, ಪೀಂಚಲುವಿನ ನಿರೀಕ್ಷೆಯಲ್ಲೇ ಇರುತ್ತಾರೆಂಬುದು ದಿಟ. ಈ ಪಾತ್ರ ನಿರ್ವಹಿಸಿರುವ ಕಲಾವಿದರು, ಒಬ್ಬರಿಗಿಂತಲೂ ಒಬ್ಬರು ನಟನೆಯಲ್ಲಿ ಮೇಲುಗೈ ತೋರುತ್ತಿದ್ದರೆ, ಗುತ್ತಿಯ ನಾಯಿ “ಹುಲಿಯ’ ಪಾತ್ರಧಾರಿಯ ನಟನೆ ಎಲ್ಲರನ್ನೂ ಮೀರಿಸುವಂತಿದೆ.

Advertisement

ಕಿರಿಸ್ತಾನರ ಪ್ರವೇಶ, ಜಕ್ಕಣಿ ಪ್ರವೇಶ, ಬೀಸೋಕಲ್ಲಿನ ದೃಶ್ಯಗಳಿಗೆ ಜನರ ಚಪ್ಪಾಳೆ ಮೇಳೈಸಿ ಹೊಸ ಹುರುಪು ಕೊಡುತ್ತದೆ. ಶತಮಾನದ ಹಿಂದೆ (ಮತ್ತು ಇಂದಿಗೂ) ಮಲೆನಾಡಿನ ಜನರ ನಡುವೆ ಇರುವ ಜಾತಿಯ ತಾರತಮ್ಯ, ಹೆಣ್ಣಿನ ಬವಣೆಗಳನ್ನು 700 ಪುಟಗಳಿಗೂ ಹೆಚ್ಚಿನ ಕಾದಂಬರಿಯನ್ನು 70ಕ್ಕೂ ಹೆಚ್ಚು ಕಲಾವಿದರು ವೇದಿಕೆಯಲ್ಲಿ ತಂದಿರುವುದು ಶ್ಲಾಘನೀಯ. ಪ್ರತಿಯೊಂದು ಪಾತ್ರವೂ ಮಲೆನಾಡಿನ ಮಣ್ಣಿನ ಭಾವನೆಗಳನ್ನು ಹೊತ್ತು ತಂದಿವೆ.

ಮಲೆನಾಡಿನ ಅಡಿಕೆ ಮರಗಳು, ಹಳ್ಳ ಕೊಳ್ಳಗಳು, ಸಣ್ಣದಾಗಿ ಹರಿವ ಝರಿಗಳು, ಕೆರೆ ಎಲ್ಲವೂ ರಂಗಸ್ಥಳದಲ್ಲಿ ನೈಸರ್ಗಿಕವಾಗಿ ಕಾಣುತ್ತವೆ. ಇವೆಲ್ಲವನ್ನೂ ಸಜ್ಜುಗೊಳಿಸಲು ಕಲಾ ನಿರ್ದೇಶಕ ಶಶಿಧರ ಅಡಪ ಹಾಗೂ ಅವರ ತಂಡ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಕೆಲಸ ಮಾಡಿರುವುದು ಶ್ಲಾಘನೀಯ.

100ನೇ ಶೋ
– ಫೆ.15, ಶನಿವಾರ, ಸಂ.7.30ಕ್ಕೆ ಚಾಲನೆ
– ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ ಆವರಣ
– 249 ರೂ.

ಮೂಲತಃ ಮಲೆನಾಡಿನವನೇ ಆದ ನನಗೆ ಇಲ್ಲಿನ ಪಾತ್ರಗಳು ನನ್ನೂರಿನವೇ ಅಂತನಿಸಿದವು. ವಸ್ತ್ರ ವಸನಾದಿಯಾಗಿ ಇನ್ನೂರು ವರ್ಷಗಳ ಹಿಂದೆ ಹೇಗಿದ್ದೀತು ನನ್ನೂರು ಎಂಬುದನ್ನು ಈ ನಾಟಕದ ಮೂಲಕ ನೋಡಲು ಸಾಧ್ಯವಾಯಿತು.
-ಚೈತ್ರಿಕಾ ಹೆಗಡೆ, ಪ್ರೇಕ್ಷಕಿ

* ಕಿರಣ್‌ ವಟಿ

Advertisement

Udayavani is now on Telegram. Click here to join our channel and stay updated with the latest news.

Next