ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮಗ ಎಂದು ಹೇಳಿಕೊಂಡು, ತಾನು ಜಯಾ ಅವರ ಮಗ ಎಂದು ಘೋಷಿಸಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಜೆ.ಕೃಷ್ಣಮೂರ್ತಿ ಈಗ ಬಂಧನಕ್ಕೊಳಗಾಗಬೇಕಾಗಿದೆ.
ಜಯಲಲಿತಾ ಹಾಗೂ ತೆಲುಗು ನಟ ಶೋಬನ್ ಬಾಬು ಅವರು ನನ್ನ ಪೋಷಕರು ಎಂದು ಸಹಿ ಮಾಡಿದ್ದ ವಿಲ್ ನ ಪ್ರತಿಯನ್ನು ಕೂಡಾ ಸಾಕ್ಷಿಯಾಗಿ ಕೋರ್ಟ್ ಗೆ ನೀಡಿದ್ದ. ಆ ನಿಟ್ಟಿನಲ್ಲಿ ಜಯಾ ಮಗ ಎಂದು ಹೇಳಿಕೊಂಡಿದ್ದ ವ್ಯಕ್ತಿ ಕೋರ್ಟ್ ಗೆ ಮಾತ್ರ ಮೋಸ ಮಾಡಿದ್ದಲ್ಲ, ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದಾಗಿ ಅಸಮಾಧಾನವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸೆಂಟ್ರಲ್ ಕ್ರೈಂ ಬ್ರಾಂಚ್ ನ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಮದ್ರಾಸ್ ಹೈಕೋರ್ಟ್ ನ ಜಸ್ಟೀಸ್ ಆರ್.ಮಾಧವನ್ ಅವರಿಗೆ ಸಲ್ಲಿಸಿದ್ದರು.
ಜೆ.ಕೃಷ್ಣಮೂರ್ತಿ ಎಂಬ ವ್ಯಕ್ತಿ ವಸಂತಮಣಿ ಎಂಬಾಕೆಯ ಮಗ, ಜಯಲಲಿತಾ ಅವರ ಮಗನಲ್ಲ ಎಂದು ವರದಿ ತಿಳಿಸಿದೆ. ಸ್ಟ್ಯಾಂಪ್ ಮಾರಾಟಗಾರರ ಬಳಿ ಹಳೇ ಸ್ಟ್ಯಾಂಪ್ ಪೇಪರ್ ಖರೀದಿಸಿ, ನಕಲಿ ದಾಖಲೆ ಸೃಷ್ಟಿಸಿರುವುದಾಗಿ ವರದಿ ವಿವರಿಸಿದೆ.
ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ ಅನ್ನು ವಂಚಿಸಿದ್ದ ಈ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಎಂದು ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶನ ನೀಡಿ, ಏಪ್ರಿಲ್ 10ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದರು.