ಚೆನ್ನೈ: ತಮಿಳುನಾಡಿನ ಎಲ್ಲ ಶಾಲಾ- ಕಾಲೇಜುಗಳಲ್ಲಿ ವಾರಕ್ಕೆ ಒಂದು ದಿನ ವಾದರೂ ‘ವಂದೇ ಮಾತರಂ’ ಹಾಡುವಂತೆ ಮದ್ರಾಸು ಹೈಕೋರ್ಟ್ ಆದೇಶಿಸಿದೆ. ಶಾಲಾ -ಕಾಲೇಜುಗಳಲ್ಲಿ ಸೋಮವಾರ ಅಥವಾ ಶುಕ್ರವಾರ ಹಾಡಬೇಕು, ಫ್ಯಾಕ್ಟರಿಗಳು ಮತ್ತು ಕಚೇರಿಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ಹಾಡಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್‌ನ ನ್ಯಾ| ಎಮ್.ವಿ. ಮುರಳೀಧರನ್ ನೇತೃತ್ವದ ನ್ಯಾಯಪೀಠ, ಸಮಸ್ಯೆಗಳಿದ್ದಲ್ಲಿ ವಂದೇ ಮಾತರಂ ಹಾಡುವುದಕ್ಕೆ ಯಾರೂ ಬಲವಂತ ಪಡಿಸಬಾರದು. ಆದರೆ ಈ ಬಗ್ಗೆ ಅವರು ನೈಜ ಕಾರಣಗಳನ್ನು ಕೊಡಬೇಕು ಎಂದು ಹೇಳಿದೆ.
ಒಂದು ವೇಳೆ ಬಂಗಾಳಿ ಅಥವಾ ಸಂಸ್ಕೃತದಲ್ಲಿ ವಂದೇ ಮಾತರಂ ಹಾಡಲು ಕಷ್ಟವಾದರೆ, ಅದನ್ನು ತಮಿಳಿಗೆ ಭಾಷಾಂತರ ಮಾಡಿ ಹಾಡುವಂತೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿ ವಂದೇ ಮಾತರಂ ಹಾಡಿನ ತಮಿಳು ಭಾಷಾಂತರ ಅವತರಣಿಕೆ, ಇಂಗ್ಲಿಷ್ ಭಾಷೆಯಲ್ಲಿರುವ ಪ್ರತಿಗಳು ಎಲ್ಲಾ ಸರಕಾರಿ ವೆಬ್‌ಸೈಟ್‌ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವಂತೆ ತಮಿಳುನಾಡು ಸರಕಾರಕ್ಕೂ ನ್ಯಾಯಪೀಠ ಸೂಚಿಸಿದೆ. ‘ಈ ದೇಶದಲ್ಲಿ ದೇಶಭಕ್ತಿ ಎನ್ನುವುದು ಪ್ರತಿ ಪ್ರಜೆಗೂ ಅಗತ್ಯವಾದದ್ದು. ಇದು ನಮ್ಮ ಮಾತೃಭೂಮಿಯಾಗಿದ್ದು, ಅದನ್ನು ನೆನೆಸಿ ಕೊಳ್ಳುವುದು ಪ್ರತಿ ಪ್ರಜೆಯ ಕರ್ತವ್ಯ’ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಇಂದಿನ ಈ ಕಠಿನ ಸಂದರ್ಭಗಳಲ್ಲಿ ‘ವಂದೇ ಮಾತರಂ’ ಅನ್ನು ಹಾಡುವುದು ಜನರಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಮೂಡಿಸಲಿದೆ. ಈ ತೀರ್ಪನ್ನು ಧನಾತ್ಮಕವಾಗಿ ಸ್ವೀಕರಿಸಿ, ಅಳವಡಿಸಿಕೊಳ್ಳಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಅಧ್ಯಾ ಪಕರ ಆಯ್ಕೆ ಪರೀಕ್ಷೆಯಲ್ಲಿ ವಂದೇಮಾತರಂ ಬಗ್ಗೆ ಪ್ರಶ್ನೆ ಇದ್ದು, ಯಾವ ಭಾಷೆಯಲ್ಲಿ ಮೊದಲು ಬರೆಯಲಾಗಿದೆ ಎಂದು ಕೇಳಲಾಗಿತ್ತು. ಇದಕ್ಕೆ ವ್ಯಕ್ತಿಯೊಬ್ಬರು ಬಂಗಾಳಿ ಎಂದು ಟಿಕ್ ಮಾಡಿದ್ದರು. ಆದರೆ ಇದು ತಪ್ಪು, ನಿಜವಾಗಿ ಸಂಸ್ಕೃತದಲ್ಲಿ ಬರೆಯಲಾಗಿತ್ತು ಎಂದು ಅಧ್ಯಾ ಪಕರ ಆಯ್ಕೆ ಮಂಡಳಿ ಹೇಳಿತ್ತು. ಇದರ ವಿರುದ್ಧ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ತೀರ್ಪಿನಲ್ಲಿ ವ್ಯಕ್ತಿಗೆ ಅಂಕವನ್ನು ನೀಡಿ, ಮುಂದಿನ ಬಾರಿ ಅಧ್ಯಾಪಕರ ಆಯ್ಕೆ ವೇಳೆ ಅವಕಾಶ ಕೊಡುವಂತೆ ಕೋರ್ಟ್ ಹೇಳಿದೆ. ಈ ತೀರ್ಪಿನ ಒಂದು ಭಾಗವಾಗಿ ವಂದೇ ಮಾತರಂ ಕಡ್ಡಾಯವಾಗಿ ಹಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಕೋರ್ಟ್ ಹೇಳಿದ್ದೇನು?
ಶಾಲಾ ಕಾಲೇಜುಗಳಲ್ಲಿ ವಾರಕ್ಕೊಮ್ಮೆಯಾದರೂ ವಂದೇ ಮಾತರಂ ಹಾಡುವುದು ಕಡ್ಡಾಯ. ಕಚೇರಿ, ಫ್ಯಾಕ್ಟರಿಗಳಲ್ಲಿ ತಿಂಗಳಿಗೊಮ್ಮೆಯಾದರೂ ಹಾಡಬೇಕು. ಹಾಡಲು ಕಷ್ಟವಾದರೆ, ಅದಕ್ಕೆ ನೈಜ ಕಾರಣ ಕೊಡಬೇಕು. ಜೊತೆಗೆ ಬಂಗಾಳಿಯಲ್ಲಿ ಹಾಡುವುದು ಕಷ್ಟವಾದರೆ ಅದನ್ನು ತಮಿಳಿಗೆ ಭಾಷಾಂತರಿಸಿ ಹಾಡಬೇಕು. ವಂದೇ ಮಾತರಂ ವೆಬ್‌ಸೈಟ್‌ಗಳಲ್ಲಿ ಸಿಗುವಂತೆ ತಮಿಳುನಾಡು ಸರಕಾರ ಕ್ರಮಕೈಗೊಳ್ಳಬೇಕು.