ಚೆನ್ನೈ : ನೀಟ್ ಪರೀಕ್ಷೆಯನ್ನು ತಮಿಳು ಭಾಷೆಯಲ್ಲಿ ಬರೆದಿರುವ ಎಲ್ಲ ಅಭ್ಯರ್ಥಿಗಳಿಗೆ 196 ಕೃಪಾಂಕ ನೀಡಬೇಕು ಎಂದು ಮದ್ರಾಸ್ ಹೈಕೋರ್ಟಿನ ಮಧುರೆ ಪೀಠವು ಇಂದು ಮಂಗಳವಾರ ಸಿಬಿಎಸ್‌ಇ ಗೆ ಆದೇಶಿಸಿದೆ.
ಎರಡು ವಾರಗಳ ಒಳಗೆ ನೀಟ್ ಕ್ರಮಾಂಕ ಪಟ್ಟಿಯನ್ನು ಪರಿಷ್ಕರಿಸುವಂತೆ ಹೈಕೋರ್ಟ್ ಸಿಬಿಎಸ್‌ಇ ಗೆ ಹೇಳಿದೆ.
ವೈದ್ಯಕೀಯ ಪ್ರವೇಶಿಕೆಗೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲಿ 49 ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸಲಾದದ್ದು ಕಂಡು ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ತಮಿಳು ಮಾಧ್ಯಮ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರ ದೋಷವನ್ನು ಉಲ್ಲೇಖೀಸಿ ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಪರಿಹಾರ ಅಂಕಗಳನ್ನು ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಕಳೆದ ಜುಲೈ 6ರಂದು ಮದ್ರಾಸ್ ಹೈಕೋರ್ಟ್ ಸಿಬಿಎಸ್‌ಇ ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ‘ಲೋಪ ದೋಷಗಳ ವಿಷಯದಲ್ಲಿ ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತೀರಿ’ ಎಂದು ಚಾಟಿ ಬೀಸಿತ್ತು.