ಮಾನ್ವಿ: ಕೋವಿಡ್ ಭೀತಿಯಿಂದಾಗಿ ಶಾಲೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ “ಮಕ್ಕಳ ಸ್ನೇಹಿ ಗ್ರಾಪಂ’ ಅಭಿಯಾನದಡಿ ಓದುವ ಬೆಳಕು ಯೋಜನೆ ಜಾರಿ ಮಾಡಲಾಗಿದ್ದು, ಕೆಲವು ಗ್ರಾಪಂಗಳಲ್ಲಿ ಮಾತ್ರ ನಡೆಸಲಾಗುತ್ತಿದೆ. ಹಲವೆಡೆ ಪಿಡಿಒಗಳ ನಿರ್ಲಕ್ಷ್ಯ ದಿಂದಾಗಿ ನಡೆಸಲಾಗುತ್ತಿಲ್ಲ.
ವಿಶ್ವಸಂಸ್ಥೆಯ 2030ರ ಗುರಿಗಳಿಗೆ ಒಪ್ಪಿಕೊಂಡಿರುವ ಭಾರತ ಸರ್ಕಾರ ಮಕ್ಕಳ ಹಕ್ಕು ರಕ್ಷಣೆ ಮುಂದಾಗಿದ್ದು, ನ.14ರಿಂದ 10 ವಾರಗಳ ಕಾಲ “ಮಕ್ಕಳ ಸ್ನೇಹಿ ಗ್ರಾಪಂ’ ಅಭಿಯಾನದಡಿ ಮಕ್ಕಳ ಹಕ್ಕುಗಳ ರಕ್ಷಣೆ, ಜನನ-ಮರಣ ಪ್ರಮಾಣ, ಪೌಷ್ಟಿಕ ಆಹಾರ, ಚುಚ್ಚುಮದ್ದು, ವಿತರಣೆ, ಸಂಗೀತ, ಕ್ರೀಡಾಕೂಟ, ನಾಟಕ, ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಆರೋಗ್ಯ, ಶೈಕ್ಷಣಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ. ಇದರಲ್ಲಿ ಓದುವ ಬೆಳಕು ಯೋಜನೆಯೂ ಒಂದು.
ಏನಿದು ಯೋಜನೆ?: ಗ್ರಾಪಂ ಗ್ರಂಥಾಲಯದಲ್ಲಿ ಸ್ಥಳೀಯ 6ರಿಂದ 18ವರ್ಷದ ಮಕ್ಕಳು ಉಚಿತ ನೋಂದಣಿ ಮಾಡಿಕೊಂಡು, ಅವರಿಗೆ ಓದಲು ಉಚಿತ ಪುಸ್ತಕ ಒದಗಿಸುವ ಯೋಜನೆ ಓದುವ ಬೆಳಕು. ನೋಂದಣಿ ವೆಚ್ಚ ಗ್ರಾಪಂ ಗ್ರಂಥಾಲಯಕ್ಕೆ ತುಂಬಬೇಕು. ಗ್ರಂಥಾಲಯದ ಮೇಲ್ವಿಚಾರಣೆ ಅಧಿಕಾರ ಸಂಪೂರ್ಣ ಪಿಡಿಒಗಳಿಗೆ ಇದೆ. ತೆರೆಯದಿದ್ದರೆ ಅವರೇ ಹೊಣೆಗಾರರು.
ಅಂಕಿ ಅಂಶ: ಒಟ್ಟು 38 ಗ್ರಾಪಂಗಳ ಪೈಕಿ ಬಾಲಕ-ಬಾಲಕಿಯರು ಸೇರಿ ಒಟ್ಟು ಪ್ರಾಥಮಿಕ ಶಾಲೆಯ ಮಕ್ಕಳ ಸಂಖ್ಯೆ 33962 ಇದ್ದು, ಕೇವಲ 4413 ಮಕ್ಕಳು ಮಾತ್ರ ನೋಂದಣಿಯಾಗಿದ್ದಾರೆ. 12293 ಪ್ರೌಡ ಶಾಲಾ ಮಕ್ಕಳಿದ್ದು, 2256 ಮಕ್ಕಳು ಮಾತ್ರ ನೋಂದಣಿಯಾಗಿದ್ದಾರೆ. ಎಲ್ಲ ಮಕ್ಕಳ ನೋಂದಣಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದು, ಗ್ರಾಪಂ ಪಿಡಿಒಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಹಳ್ಳ ಹಿಡಿಯುತ್ತಿದೆ. ಇನ್ನಾದರೂ ಮೇಲಾಧಿಕಾರಿಗಳು ಓದುವ ಬೆಳಕು ಯೋಜನೆ ಯಶಸ್ವಿಗೆ ಶ್ರಮಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ.
ಕೋವಿಡ್‌ನಿಂದಾಗಿ ಶಾಲೆ ಮುಚ್ಚಿರುವ ಕಾರಣ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ತಾಲೂಕಿನ ಗ್ರಾಪಂ ಗ್ರಂಥಲಾಯಗಳಲ್ಲಿ ಓದುವ ಬೆಳಕು ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಕೆಲವೆಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪ್ರಾರಂಭವಾಗದ ಗ್ರಂಥಾಲಯಗಳ ಬಗ್ಗೆ ತಾಪಂ ಇಒಗಳೊಂದಿಗೆ ಚರ್ಚಿಸಿ ಪ್ರಾರಂಭಿಸಲಾಗುವುದು. –
ವೆಂಕಟೇಶ ಗುಡಿಹಾಳ, ಕ್ಷೇತ್ರ ಶಿಕ್ಷಣಾಧಿಕಾರಿ, ಮಾನ್ವಿ
“ಓದುವ ಬೆಳಕು’ ಒಂದು ಉತ್ತಮ ಯೋಜನೆ. ಗ್ರಾಪಂ ಗ್ರಂಥಾಲಯಗಳಲ್ಲಿ ಮಕ್ಕಳನ್ನು ನೋಂದಾಯಿಸಿಕೊಂಡು ಉಚಿತ ಪುಸ್ತಕ ವಿತರಿಸಲಾಗುವುದು. ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಒದಗಿಸುತ್ತೇವೆ. ಉಳಿದಂತೆ ಹೆಚ್ಚಿನ ಅಧಿಕಾರ ಪಿಡಿಒಗಳಿಗೆ ಇದ್ದು, ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯಗುರು, ಪಾಲಕರೊಂದಿಗೆ ಗ್ರಾಮಸಭೆ ನಡೆಸಿ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಗ್ರಂಥಾಲಯ ನಡೆಸಬೇಕು.
– ಎಂ.ಎಸ್. ರೆಬಿನಾಳ,ಮುಖ್ಯ ಗ್ರಂಥಾಲಯ ಅಧಿಕಾರಿ, ಕೇಂದ್ರ ಗ್ರಂಥಾಲಯ, ರಾಯಚೂರು
-ರವಿ ಶರ್ಮಾ