ಮುದ್ದೇಬಿಹಾಳ: ತಾಲೂಕಿನ ಢವಳಗಿಯ ಮಡಿವಾಳೇಶ್ವರರ 511ನೇ ಜಾತ್ರಾ ಮಹೋತ್ಸವ ರವಿವಾರ ಸಂಜೆ ಸಾವಿರಾರು ಭಕ್ತರು ರಥೋತ್ಸವ ನಡೆಸಿಕೊಡುವ ಮೂಲಕ ಸಮಾರೋಪಗೊಂಡಿತು.
ಗದ್ದುಗೆಮಠದ ಘನಮಠೇಶ್ವರ ಸ್ವಾಮಿಗಳ ಸಮ್ಮುಖ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ರಥೋತ್ಸವ ಹಿನ್ನೆಲೆ ಗ್ರಾಮದ ಮುಕ್ಕಣ್ಣಪ್ಪ ಕೋರಿ ಮನೆಯಿಂದ ತೇರಿನ ಮಿಣಿ, ಹಳ್ಳೂರ ಗ್ರಾಮದಿಂದ ತೇರಿನ ಉತ್ಸವ ಮೂರ್ತಿ, ಮಾದಿನಾಳ, ತಾರನಾಳ ಗ್ರಾಮಗಳಿಂದ ತೇರಿನ ಕಳಸವನ್ನು ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಗಿತ್ತು. ರಥೋತ್ಸವ ಸಂದರ್ಭ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ, ಲಾಡು ಮತ್ತಿತರ ವಸ್ತುಗಳನ್ನು ತೇರಿನ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.
ಪ್ರಮುಖರಾದ ಸಿದ್ದನಗೌಡ ಬಿರಾದಾರ, ರಾಮನಗೌಡ ಬಿರಾದಾರ, ಮನೋಹರ ಕೋರಿ, ಶ್ರೀಧರ ಕಲ್ಲೂರ, ಮಲ್ಲನಗೌಡ ಬಿರಾದಾರ, ಧನಶೆಟ್ಟಿ ಕೋರಿ, ಕಾಶೀನಾಥಗೌಡ ಕೊಣ್ಣೂರ, ಸುರೇಶ ಪಾಟೀಲ, ವಿಜುಗೌಡ ಪಾಟೀಲ ಸೇರಿದಂತೆ ಹಲವರು ಮುಂಚೂಣಿಯಲ್ಲಿದ್ದು ಎಲ್ಲ ಕಾರ್ಯಗಳು ಸಾಂಗವಾಗಿ ನಡೆಯುವಂತೆ ನೋಡಿಕೊಂಡರು.
575 ಮುತ್ತೈದೆಯರಿಗೆ ಉಡಿ: ಜಾತ್ರೆ ಹಿನ್ನೆಲೆ ಸಮಾಜಸೇವಕ ರಾಮನಗೌಡ ಬಿರಾದಾರ ನೇತೃತ್ವದಲ್ಲಿ ದೇವಸ್ಥಾನ ಆವರಣದಲ್ಲಿ ಶನಿವಾರ 575 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹೂವಿನ ಹಿಪ್ಪರಗಿಯ ಪತ್ರಿಮಠದ ದ್ರಾಕ್ಷಾಯಣಿ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಘನಮಠೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರಾಮನಗೌಡರು ಮಾತನಾಡಿ, ದಿನ ವರ್ಷದ ಜಾತ್ರೆಯಲ್ಲಿ 1001 ಮುತ್ತೆದೆಯರಿಗೆ ಉಡಿ ತುಂಬಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಕೇದಾರಶ್ರೀ ಪಲ್ಲಕ್ಕಿ ಉತ್ಸವ: ಜಾತ್ರೆ ಹಿನ್ನೆಲೆ ಶನಿವಾರ ಸಂಜೆ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧಿಧೀಶ್ವರ 1008 ಜಗದ್ಗುರು ಭೀಮಶಂಕರಲಿಂಗ ಶಿವಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನಡೆಸಲಾಯಿತು.