ಮಡಿಕೇರಿ: ವಾಲ್ನೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಕೃಷಿಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯ ಬೆಳೆಗಾರ ಭುವನೇಂದ್ರ ಅವರ ತೋಟಕ್ಕೆ ದಾಳಿ ಮಾಡಿದ ಸುಮಾರು 9ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೃಷಿ ಬೆಳೆಗಳನ್ನು ನಾಶ ಮಾಡಿದೆ.
ಏಳು ವರ್ಷಗಳಾಗಿರುವ 100ಕ್ಕೂ ಅಧಿಕ ಅಡಿಕೆ ಗಿಡಗಳು, ಕಾಫಿ ಗಿಡ, ಕಾಳು ಮೆಣಸು ಬಳ್ಳಿಗಳನ್ನು ಧ್ವಂಸ ಮಾಡಿದೆ.
ಸುತ್ತಮುತ್ತಲ ತೋಟ ಮತ್ತು ಗದ್ದೆಗಳಿಗೂ ಲಗ್ಗೆ ಇಟ್ಟಿರುವ ಕಾಡಾನೆಗಳು ಕೃಷಿಕರ ಕೈಗೆ ಬಂದ ಫಸಲನ್ನು ಬಾಯಿಗೆ ಬಾರದಂತೆ ಮಾಡಿವೆ. ಈ ಭಾಗದ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅರಣ್ಯ ಇಲಾಖೆ ತತ್‌ಕ್ಷಣ ಈ ಭಾಗದ ರೈಲು ಕಂಬಿಯ ಬೇಲಿಗಳನ್ನು ದುರಸ್ತಿ ಪಡಿಸಬೇಕೆಂದು ಭುವನೇಂದ್ರ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ
ಮೀನುಕೊಲ್ಲಿ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.