Advertisement

ಮಡಿಕೇರಿ:ಯುವಕನ ಕೊಲೆ: ಒಬ್ಬನ ಸೆರೆ

04:30 PM Mar 25, 2017 | Team Udayavani |

ಮಡಿಕೇರಿ: ಯುವಕ ನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಡಿಕೇರಿ ನಗರದ ಕನ್ನಂಡ ಬಾಣೆ ಬಡಾವಣೆಯಲ್ಲಿ ಸಂಭವಿಸಿದೆ.  ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಬಂದ ದುಷ್ಕರ್ಮಿ ಗಳು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕನ್ನಂಡಬಾಣೆ  ವಾಸಿ ಗೋಕುಲ್‌ ಎಂಬಾತನೇ ಮೃತ ಯುವಕನಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮುಂಡೇಶ್ವರಿ ನಗರದ ನಿವಾಸಿ ಕಾರ್ತಿಕ್‌ ಎಂಬಾತನನ್ನು ಬಂಧಿಸಲಾಗಿದೆ.

ರಾತ್ರಿ ತನ್ನ ಮನೆಯತ್ತ ಬೈಕ್‌ನಲ್ಲಿ ತೆರಳುತ್ತಿದ್ದ ಗೋಕುಲ್‌ ಮೇಲೆ ಆಟೋ ರಿಕ್ಷಾದಲ್ಲಿ ಬಂದಿದ್ದ ಹಂತಕರ ತಂಡ ಏಕಾಏಕಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಹಲ್ಲೆಯಿಂದ ಗೋಕುಲ್‌ನ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  

ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಂದರ್ಭ ಕಾರ್ತಿಕ್‌ ಚಾಮುಂಡೇಶ್ವರಿ ನಗರದ ಗಿಡಗಳ ನಡುವೆ ಬಚ್ಚಿಟ್ಟುಕೊಂಡಿರುವುದು ಕಂಡು ಬಂತು. ಗುರುವಾರ ನಸುಕು 4 ಗಂಟೆ ವೇಳೆಗೆ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. 

ಕೆಲವು ದಿನಗಳ ಹಿಂದೆ ಯುವಕರ ಎರಡು ಗುಂಪುಗಳ ನಡುವೆ ನಡೆದಿದ್ದ ಕಲಹದ ವೈಷಮ್ಯವೇ ಕೊಲೆಗೆ ಕಾರಣವೆಂದು ಹೇಳಲಾಗಿದೆ. ಕೊಲೆಯಾದ 50 ಮೀಟರ್‌ ದೂರದಲ್ಲಿ ಕೆ.ಎ. 12 ಎ. 6526 ಸಂಖ್ಯೆಯ ಆಟೋ ರಿûಾವೊಂದು ಪತ್ತೆಯಾಗಿದೆ. ಇದರಲ್ಲಿ ರಕ್ತದ ಕಲೆಗಳು ಗೋಚರಿಸಿದ್ದು, ಹಂತಕರು ಕೊಲೆಗೆ ಇದೇ ಆಟೋ ಬಳಸಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಘಟನೆ ಸ್ಥಳಕ್ಕೆ ಭೇಟಿ ನೀಡಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬಂದಿ  ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕೃತ್ಯದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. 

Advertisement

ನಗರದಲ್ಲಿ ನೈಟ್‌ ಬೀಟ್‌ ಕೊರತೆ
ಮಡಿಕೇರಿ ನಗರದಲ್ಲಿ ಪೊಲೀಸರು ನೈಟ್‌ಬೀಟ್‌ ಮಾಡುತ್ತಿಲ್ಲವೆಂದು ಆರೋಪಿಸಿರುವ ಸಾರ್ವಜನಿಕರು, ಮುಖ್ಯ ರಸ್ತೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಿಬಂದಿಗಳು ನಿರ್ಜನ ಪ್ರದೇಶದಲ್ಲಿ ಸಂಚರಿಸದೆ ಇರುವುದೇ ಈ ರೀತಿಯ ಘಟನೆಗಳಿಗೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಯುವಕರ ಗುಂಪುಗಳು ರಾತ್ರಿ ವೇಳೆಯಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳನ್ನು ಸೇವಿಸಿ ಪ್ರಚೋದನಕಾರಿಯಾಗಿ ನಡೆದುಕೊಳ್ಳುತ್ತಿರುವುದಲ್ಲದೆ ಗುಂಪು ಘರ್ಷಣೆಯಲ್ಲೂ ತೊಡಗುತ್ತಿರುವ ಬೆಳವಣಿಗೆ ಕಂಡು ಬಂದಿದೆ. ಪೊಲೀಸರು ನಿರ್ಜನ ಬಡಾವಣೆಗಳಲ್ಲೂ ರಾತ್ರಿ ಭೇಟಿ ಮಾಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next