Advertisement

ಮಡಿಕೇರಿ: ಶ್ರಮ ಜೀವಿಗೆ ಸಮ್ಮಾನ 

05:03 PM Apr 13, 2017 | Team Udayavani |

ಮಡಿಕೇರಿ: ಸುದೀರ್ಘ‌ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ವತಿಯಿಂದ ಸಮ್ಮಾನಿಸಲಾಯಿತು.

Advertisement

ಕಳೆದ 30 ವರ್ಷಗಳ ಕಾಲ ಪೊನ್ನಂಪೇಟೆ ಗ್ರಾಮ ಪಂಚಾಯತ್‌ನಲ್ಲಿ ಪೌರಕಾರ್ಮಿಕ ರಾಗಿ ಸುದೀರ್ಘ‌ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿವ ಕಾಲೋನಿಯ ನಿವಾಸಿಯಾದ ನಂಜಮ್ಮನವರನ್ನು ವಿರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷರಾದ ರೇಖಾ ಶ್ರೀಧರ್‌, ಸಮಾಜದಲ್ಲಿ ಬೇರೆಬೇರೆ ವೃತ್ತಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಸಹಜ. ಆದರೆ ಇಡೀ ಪಟ್ಟಣದ ಶುಚಿತ್ವದ ಕಾಯಕದಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ನಂಜಮ್ಮನವರನ್ನು ಸಮ್ಮಾನಿಸುತ್ತಿರುವುದು ಗಮನಾರ್ಹವೆಂದರು.

ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯ ಪರಿಶ್ರಮ ಮತ್ತು ಸಾಧನೆಯನ್ನು ಪ್ರತಿಯೊಬ್ಬರು ಗುರುತಿಸುವಂತಾಗಬೇಕು ಎಂಬ ಕಾರಣದಿಂದ ಇವರನ್ನು ಸನ್ಮಾನಿಸಲಾಗಿದೆ. 

ಪೊನ್ನಂಪೇಟೆ ಗ್ರಾಮ ಪಂಚಾಯತ್‌ಗೆ ಉತ್ತಮ ಗ್ರಾಮ ಪುರಸ್ಕಾರ ಪ್ರಶಸ್ತಿ ಹಾಗೂ 5 ಲಕ್ಷ ರೂ. ಅನುದಾನ ಬರಲು ನಂಜಮ್ಮನವರಂತಹ ಪೌರ ಕಾರ್ಮಿಕರ ಅವಿರತ ಪರಿಶ್ರಮ ಕಾರಣವೆಂದು ರೇಖಾ ಶ್ರೀಧರ್‌ ಶ್ಲಾ ಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮನೆಯಪಂಡ ಶೀಲಾ ಬೋಪಣ್ಣ ಮಾತನಾಡಿ ಪ್ರತಿಯೊಬ್ಬರು ಕೂಡ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮ್ಮಾನಿಸುವಂತಾಗಬೇಕು. ಕೇವಲ ಅರ್ಜಿ, ಬೇರೆಯವರಿಂದ ಒತ್ತಡ ಹಾಕಿಸಿಕೊಂಡು ಸಮ್ಮಾನ ಪಡೆದುಕೊಳ್ಳುವುದು ನಿಲ್ಲುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಪಾರ್ವತಿಗೋವಿಂದನ್‌, ನಿಸರ್ಗ ಯುವತಿ ಮಂಡಳಿ ಕಾರ್ಯದರ್ಶಿ ಜಯಂತಿ ಸುರೇಶ್‌, ಖಜಾಂಜಿ ಅನುಪಮ ವಿನೋದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next