Advertisement

ಮಡಿಕೇರಿ: ಶಂಕಿತ ನಕ್ಸಲರು ಪ್ರತ್ಯಕ್ಷ , ಅಕ್ಕಿಯೊಂದಿಗೆ ಪರಾರಿ

02:59 AM Apr 26, 2019 | Team Udayavani |

ಮಡಿಕೇರಿ: ತಾಲೂಕಿನ ಯವಕಪಾಡಿ ಗ್ರಾಮದ ತಡಿಯಂಡ ಮೋಳ್‌ ಬೆಟ್ಟ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಕಂಡುಬಂದಿದ್ದು, ನಕ್ಸಲರಿರಬೇಕೆಂದು ಶಂಕಿಸಲಾಗಿದೆ. ಮನೆಯೊಂದಕ್ಕೆ ನುಗ್ಗಿ ಅಕ್ಕಿ ಮತ್ತು ಮಹಿಳೆಯೊಬ್ಬರ ಕೈಯಿಂದ ಮೊಬೈಲ್‌ ಫೋನನ್ನು ಕಿತ್ತುಕೊಂಡು ಅವರು ಪರಾರಿಯಾಗಿದ್ದಾರೆ.

Advertisement

ಮೊಬೈಲ್‌ನ್ನು ಸ್ವಲ್ಪ ದೂರದಲ್ಲಿ ಎಸೆಯಲಾಗಿದೆ. ಗುರುವಾರ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಗ್ರಾಮದ ಕಾರ್ಯಪ್ಪ ಅವರ ಪತ್ನಿ ಅನಿತಾ ಮಕ್ಕಳೊಂದಿಗೆ ಮನೆಯಲ್ಲಿ ದ್ದರು. ಕಾರ್ಯಪ್ಪ ಅವರಿಗೆ ಫೋನ್‌ ಮಾಡಲೆಂದು ಅಂಗಳಕ್ಕೆ ಬಂದಾಗ ಕಾಫಿ ಗಿಡಗಳ ಮರೆಯಿಂದ ಚೂಡಿದಾರ್‌ ಮತ್ತು ಓವರ್‌ ಕೋಟ್‌ ಧರಿಸಿದ್ದ ಸುಮಾರು 40ರ ಹರೆಯದ ಓರ್ವ ಮಹಿಳೆ ಮತ್ತು ಕಪ್ಪು ಜರ್ಕಿನ್‌ ಮತ್ತು ಕಪ್ಪು ಬ್ಯಾಗ್‌ ಹಿಡಿದಿದ್ದ ಪುರುಷ ಇದ್ದಕ್ಕಿದ್ದಂತೆ ಹೊರಬಂದರು. ಮಹಿಳೆಯು ಅನಿತಾ ಕೈಯಿಂದ ಮೊಬೈಲ್‌ ಕಸಿದು ಯಾರಿಗಾದರೂ ಮಾಹಿತಿ ನೀಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದರು. ಸಮೀಪದ ರಾಜೇಶ್‌ ಅವರ ಮನೆಯಿಂದ ಇದೇ ಸಂದರ್ಭ ರೇಶನ್‌ ಅಕ್ಕಿ ಕಾಣೆಯಾಗಿದ್ದು, ಅದನ್ನು ಈ ಅಪರಿಚಿತರು ಕದ್ದೊಯ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪರಿಸರದಲ್ಲಿ ಭಯದ ವಾತಾ ವರಣ ಮೂಡಿದ್ದು, ನಕ್ಸಲ್‌ ನಿಗ್ರಹ ದಳ ಮತ್ತು ಕೊಡಗು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಳೆಯಾಗುತ್ತಿಲ್ಲ: ಎಸ್‌ಪಿ
ಸುದ್ದಿ ಹರಡುತ್ತಿದ್ದಂತೆ ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಡಿ. ಪನ್ನೇಕರ್‌, ಗ್ರಾಮಕ್ಕೆ ಭೇಟಿ ನೀಡಿದ ಇಬ್ಬರು ಅಪರಿಚಿತರಿಗೂ ನಕ್ಸಲರಿಗೂ ಹೋಲಿಕೆಯಾಗುತ್ತಿಲ್ಲ ಎಂದಿದ್ದಾರೆ.

ಮಹಿಳೆೆಗೆ ನಕ್ಸಲರ ಭಾವಚಿತ್ರಗಳನ್ನು ತೋರಿಸಿ ಪ್ರಶ್ನಿಸಿದಾಗ, ಬಂದವರಿಗೆ ಹೋಲಿಕೆಯಾಗುವುದಿಲ್ಲ ಎಂದಿದ್ದಾರೆ. ಅಪರಿಚಿತರು ಸಮವಸ್ತ್ರ ಧರಿಸಿರಲಿಲ್ಲ; ಆಯುಧ ಹೊಂದಿರಲಿಲ್ಲ. ಅಕ್ಕಿ ಒಯ್ದಿದ್ದಾರೆ ಎನ್ನಲಾಗುತ್ತಿದ್ದರೂ ಯಾರೂ ನೋಡಿಲ್ಲ. ಆದ್ದರಿಂದ ಬಂದವರು ನಕ್ಸಲರು ಎನ್ನುವುದಕ್ಕೆ ಆಧಾರ ಇಲ್ಲ. ಶೋಧ ನಡೆಯುತ್ತಿದೆ ಎಂದು ಎಸ್‌ಪಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next