ಮಡಿಕೇರಿ: ದೇಶದ ವಿವಿಧೆಡೆ ಮುಸಲ್ಮಾನರು ಹಾಗೂ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖರು ಹಲ್ಲೆ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಬ್ದುಲ್ ಹ್ಯಾರಿಸ್ ಮಾತನಾಡಿ, ಕಳೆದ 4 ವರ್ಷಗಳಿಂದ ದಲಿತ ಹಾಗೂ ಮುಸ್ಲಿಂ ವರ್ಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ವಿದ್ಯಾರ್ಥಿ ಎಸ್.ಪ್ರದೀಪ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಬೆಂಗಳೂರಿನ ರಾಮನಗರದಲ್ಲಿ ಸೈಯ್ಯದ್ ತೌಫಿಕ್ ಎಂಬ ಅಮಾಯಕನ ಮೇಲೆ ದೌರ್ಜನ್ಯ ನಡೆದು ಎರಡು ತಿಂಗಳು ಕಳೆದರು ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಶಿರಸಿಯಲ್ಲಿ ರಾಜಕೀಯ ಕಾರಣಕ್ಕಾಗಿ ಅಸ್ಲಾಂ ಎಂಬಾತನ ಕೊಲೆಯಾಗಿದ್ದು, ಇಲ್ಲಿಯವರೆಗೆ ತಪ್ಪಿತಸ್ಥರನ್ನು ಬಂಧಿಸಿಲ್ಲವೆಂದು ಅಬ್ದುಲ್ ಹ್ಯಾರಿಸ್ ದೂರಿದರು. ಹತ್ಯೆಗೀಡಾದವರ ಕುಟುಂಬ ವರ್ಗಕ್ಕೆ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬುಕರ್ ಮಾತನಾಡಿ, ಶಾಂತಿ, ಸೌಹಾರ್ದತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಜಾತಿ-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಜನಜಾಗೃತಿ ಮೂಡಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್, ನಗರಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಿಯಾಜ್, ಪಿಎಫ್ಐ ಕಾರ್ಯದರ್ಶಿ ಇಬ್ರಾಹಿಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.