Advertisement

ಸತತ ಕುಸಿತ: ವಾಹನ ಸವಾರರಲ್ಲಿ  ಆತಂಕ

11:35 AM Aug 13, 2018 | |

ಸುಳ್ಯ: ಚಾರ್ಮಾಡಿ ಘಾಟಿ ರಸ್ತೆ ಸುಧಾರಣೆಯಾಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ-ಮಡಿಕೇರಿ ತನಕದ ರಸ್ತೆ ಹದಗೆಟ್ಟಿದೆ. ಅಲ್ಲಲ್ಲಿ ಕುಸಿತ ಕಾಣುತ್ತಿದ್ದು, ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.

Advertisement

ಕೊಡಗು ಭಾಗದಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಗುಡ್ಡ, ಕಾಡು ಆವೃತ್ತ ಪ್ರದೇಶದಲ್ಲಿ ನೀರಿನ ಹರಿವು, ಒರತೆ ಹೆಚ್ಚಿರುವುದರ ಜತೆಗೆ ಚರಂಡಿ ವ್ಯವಸ್ಥೆಯ ಕೊರತೆಯೂ ರಸ್ತೆ ಕುಸಿತ ಹಾಗೂ ಹದಗೆಡಲು ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

25 ಕಿ.ಮೀ. ದೂರ
ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯಿಂದ ಮಡಿಕೇರಿ ತನಕ ಅರಣ್ಯ, ಗುಡ್ಡಬೆಟ್ಟಗಳ ಮಧ್ಯೆ 25 ಕಿ.ಮೀ. ಉದ್ದದ ಏರುತಗ್ಗಿನ ರಸ್ತೆ ಹಾದು ಹೋಗಿದೆ. ಸದಾ ವಾಹನ ದಟ್ಟಣೆ ಹೊಂದಿದೆ. ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳು ಹಾಳಾಗಿ ವಾಹನ ಸಂಚಾರಕ್ಕೆ ನಿಷೇಧ ಎದುರಾದಾಗ ಇದೇ ರಸ್ತೆ ಆಪದಾºಂಧವನಾಗಿತ್ತು.

ಪದೇಪದೆ ಕುಸಿತ
ಅಗಲಗೊಂಡು ಹೊಸ ರಸ್ತೆಯಾಗಿ ಅಭಿವೃದ್ಧಿಗೊಂಡ ವರ್ಷದೊಳಗೆ, 2013ರ ಆಗಸ್ಟ್‌ನಲ್ಲಿ ಕೊಯನಾಡು ಬಳಿ 200 ಮೀ. ಉದ್ದಕ್ಕೆ, 5 ಅಡಿ ಆಳಕ್ಕೆ ಕುಸಿದಿತ್ತು. ಆಗ ಕೆಲವು ತಿಂಗಳು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಅಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಕಾಂಕ್ರೀಟ್‌ ತಡೆಗೋಡೆ ಸಹಿತ ಹೊಸ ರಸ್ತೆ ನಿರ್ಮಿಸಲಾಗಿತ್ತು. ಒಂದು ತಿಂಗಳ ಹಿಂದೆ ಇದೇ ಜಾಗದಲ್ಲಿ ಮತ್ತೆ ಬಿರುಕು ಉಂಟಾಗಿ ಎಂಟು ಇಂಚಿನಷ್ಟು ರಸ್ತೆ ಕುಸಿದಿದೆ. ಸುರಕ್ಷತೆಯ ದೃಷ್ಟಿಯಿಂದ ಘನ ವಾಹನ ಸಂಚಾರಕ್ಕೆ ಪಕ್ಕದ ಹಳೆ ರಸ್ತೆ ಬಳಸಲಾಗಿದೆ. ಮಡಿಕೇರಿ ಪೇಟೆಯಿಂದ 1 ಕಿ.ಮೀ. ದೂರದ ಹೋಂ ಸ್ಟೇ ಬಳಿ ಗುಡ್ಡ ಕುಸಿದು ಮಂಗಳೂರು -ಬೆಂಗಳೂರು ರಸ್ತೆ ಸಂಪರ್ಕ ಕೆಲವು ತಾಸು ಕಡಿತಗೊಂಡಿತ್ತು. 

ಎರಡು ದಿನಗಳ ಹಿಂದೆ ಮಡಿಕೇರಿಯಿಂದ 5 ಕಿ.ಮೀ. ದೂರ ಇರುವ ಕಾಟಿಕೇರಿ ಕಾಳತ್‌ಮನೆ ಸಮೀಪ ರಸ್ತೆಯ ಒಂದು ಪಾರ್ಶ್ವ 50 ಅಡಿಗಳಷ್ಟು ಕುಸಿದಿದೆ. ಅಲ್ಲೀಗ‌ ಏಕಮುಖ ಸಂಚಾರ ಇದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಸಂಪರ್ಕ ಕಡಿತ ಭೀತಿ ಎದುರಾಗಲಿದೆ.

Advertisement

ಕಾಂಕ್ರೀಟ್‌ ಸೂಕ್ತ
ಪ. ಘಟ್ಟ ಪ್ರದೇಶವಾದ್ದರಿಂದ ಭಾರೀ ಮಳೆ, ಒರತೆ ವರ್ಷದ ಹಲವು ತಿಂಗಳು ಇರುತ್ತದೆ. ಜತೆಗೆ ಮಡಿಕೇರಿಯಿಂದ ಸಂಪಾಜೆ ತನಕದ ಶೇ. 85ರಷ್ಟು ಭಾಗದಲ್ಲಿ ಡಾಮರು ಮಣ್ಣಿನ ಗುಣಮಟ್ಟಕ್ಕೆ ಹೊಂದುವುದಿಲ್ಲ. ಹಾಗಾಗಿ ಕಾಂಕ್ರೀಟ್‌ ರಸ್ತೆಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಕ್ಕೆಲಗಳ ಗುಡ್ಡ ಮತ್ತು ತಗ್ಗು ಪ್ರದೇಶದಲ್ಲಿ ಮಣ್ಣು ಕುಸಿಯದಂತೆ ಕಾಂಕ್ರೀಟ್‌ ತಡೆಗೋಡೆಗಳನ್ನು ನಿರ್ಮಿಸಿಲ್ಲ. 
ಮದೆನಾಡು ಬಳಿ ನಿರ್ಮಿಸಿದ ತಡೆಗೋಡೆಯಿಂದ ಅಲ್ಲಿ ಕುಸಿತ ನಿಯಂತ್ರಣಕ್ಕೆ ಬಂದಿದೆ. ಈ ಸುರಕ್ಷಾ ಕ್ರಮ ಎಲ್ಲೆಡೆ ಅಗತ್ಯ. ಇದರೊಂದಿಗೆ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ಅವಶ್ಯ. ಇಕ್ಕೆಲಗಳಲ್ಲಿ ಕಾಂಕ್ರೀಟ್‌ ಚರಡಿ ಅಗತ್ಯವಿದ್ದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಎಂಬುದು ಸ್ಥಳೀಯರ ಆಗ್ರಹ. 

ಹೊಸ ರಸ್ತೆ ಆಗಿ  ಆರೇ ವರ್ಷ!
ಕೆಆರ್‌ಡಿಸಿಎಲ್‌ ವಾಪ್ತಿಯ ಮಾಣಿ-ಮೈಸೂರು ರಾಜ್ಯ ಹೆದ್ದಾರಿ 88 ಅನ್ನು 2009ರಲ್ಲಿ ವಿಸ್ತರಿಸಿ ಮೂರು ಹಂತದಲ್ಲಿ ಕಾಮಗಾರಿ ನಡೆಸಲಾಗಿತ್ತು. ಕುಶಾಲನಗರ-ಮಡಿಕೇರಿ-ಸಂಪಾಜೆ ತನಕ ಎರಡನೇ ಹಂತದಲ್ಲಿ ಕಾಮಗಾರಿ ನಡೆಸಿ, 2012ರಲ್ಲಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಯಿತು. 2013ರಲ್ಲಿ ರಾ.ಹೆ. 275 ಆಗಿ ಮೇಲ್ದರ್ಜೆಗೆ ಏರಿದ್ದು, ಈಗ ರಾ. ಹೆ. ಪ್ರಾಧಿಕಾರದ ಸುಪರ್ದಿಯಲ್ಲಿದೆ. ಆರು ವರ್ಷಗಳಲ್ಲೇ ಈ ರಸ್ತೆ ಹಾಳಾಗಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. 

ಮಳೆಗಾಲದ  ಬಳಿಕ  ಕ್ರಮ
ರಸ್ತೆ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪರಿಣಿತ ಅಧಿಕಾರಿಗಳ ತಂಡ ವೈಜ್ಞಾನಿಕ ಮಾದರಿಯ ಕಾಮಗಾರಿ ಬಗ್ಗೆ ನಿರ್ಧರಿಸಲಿದೆ. ಬಿರುಕು, ಕುಸಿತ ತಡೆಯುವ ಕ್ರಮಗಳ ಬಗ್ಗೆ ಮಳೆಗಾಲದ ಅನಂತರ ಯೋಜನೆ ರೂಪಿಸಿ ಜಾರಿಗೊಳಿಸಲಾಗುವುದು.
 - ಸುಬ್ಬರಾಮ ಹೊಳ್ಳ, ಕಾ.ನಿ. ಎಂಜಿನಿಯರ್‌, ರಾ. ಹೆ. ಇಲಾಖೆ
* ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next