Advertisement

ಮಡಿಕೇರಿ: ವ್ಯಾಪಾರಿಗಳಿಂದ ದಿಢೀರ್‌ ಪ್ರತಿಭಟನೆ

01:30 AM Feb 15, 2020 | sudhir |

ಮಡಿಕೇರಿ: ಮಡಿಕೇರಿಯ ಮಾರುಕಟ್ಟೆ ಆವರಣ ಅಶುಚಿತ್ವದಿಂದ ಕೂಡಿದ್ದು, ಮಾಂಸದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಸಂತೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

Advertisement

ತರಕಾರಿ ಮತ್ತು ಮಾಂಸದ ಮಾರುಕಟ್ಟೆಗಳ ಅವ್ಯವಸ್ಥೆ ಹಾಗೂ ಅಶುಚಿತ್ವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು ಮಾರುಕಟ್ಟೆ ಆವರಣದಲ್ಲಿ ನಗರಸಭೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೀನು ಮತ್ತು ಮಾಂಸ ಮಾರಾಟದ ಪ್ರದೇಶ ಅಭಿವೃದ್ಧಿ ಕಾಣದೆ ಅವೈಜ್ಞಾನಿಕ ವ್ಯವಸ್ಥೆಯಿಂದ ದುರ್ವಾಸನೆ ಬೀರುತ್ತಿದೆ ಎಂದು ಆರೋಪಿಸಿದರು.

ವ್ಯಾಪಾರಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್‌, 2016ರಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಹೈಟೆಕ್‌ ಮಾರುಕಟ್ಟೆ ಎಂದು ನಂಬಿಸಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆದಿದೆಯಲ್ಲದೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಚರಂಡಿ ಮತ್ತು ವಿದ್ಯುತ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ಸಂತೆ ವ್ಯಾಪಾರಿಗಳು ಮಾತ್ರವಲ್ಲದೆ ಸಾರ್ವಜನಿಕರು ಕೂಡ ಪರದಾಡುವ ಪರಿಸ್ಥಿತಿ ಇದೆ.

ಮಾಂಸದ ಮಾರುಕಟ್ಟೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ತ್ಯಾಜ್ಯಗಳು ಕೊಳೆತು ನಾರುತ್ತಿದ್ದರೂ ಜವಬ್ದಾರಿಯುತ ಸ್ಥಾನದಲ್ಲಿರುವ ನಗರಸಭಾ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲವೆಂದು ಆರೋಪಿಸಿದರು.

ಮೀನು ಮತ್ತು ಮಾಂಸ ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗುತ್ತದೆ, ಅಲ್ಲದೆ ಶುಚಿತ್ವವನ್ನು ಕಾಪಾಡಲು ಅಗತ್ಯ ನೀರಿನ ವ್ಯವಸ್ಥೆಯನ್ನು ಕೂಡ ಮಾಡಬೇಕಾಗುತ್ತದೆ. ಆದರೆ ಇದ್ಯಾವುದನ್ನೂ ಮಾಡದ ನಗರಸಭೆ ಕೇವಲ ಹರಾಜು ಪ್ರಕ್ರಿಯೆಯನ್ನಷ್ಟೇ ನಡೆಸಿ ಆದಾಯವನ್ನು ಸಂಗ್ರಹಿಸುವುದರಲ್ಲೇ ಮಗ್ನವಾಗಿದೆ ಎಂದು ಗಣೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪ್ರತಿದಿನ ನಗರಸಭೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಇರುವುದರಿಂದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರ ಹಾಗೂ ಸಂತೆ ವ್ಯಾಪಾರಿಗಳ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ನಿಯಮಾನುಸಾರ ಹೈಟೆಕ್‌ ಮಾರುಕಟ್ಟೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ತಪ್ಪಿದ್ದಲ್ಲಿ ನಗರಸಭಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಜೆಡಿಎಸ್‌ ಕಾರ್ಯದರ್ಶಿ ಎನ್‌.ಸಿ.ಸುನೀಲ್‌, ಖಜಾಂಚಿ ಡೆನ್ನಿ ಬರೋಸ್‌, ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್‌, ಎಂ.ಎಂ.ಶೌಕತ್‌ ಆಲಿ, ಯಾಕುಬ್‌, ಫಾರುಕ್‌, ರಫಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next