ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಬಂಧಿಯಾಗಿರುವ ಆರೋಪಿಯೊಬ್ಬ ಅಂತರ್ ಜಿಲ್ಲಾ ವಾಹನ ಚೋರನೂ ಆಗಿದ್ದಾನೆ ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ಆರ್ಜಿ ಗ್ರಾ.ಪಂ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಎನ್.ದರ್ಶನ್ ನಾಯಕ್ (26) ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 11 ದ್ವಿಚಕ್ರ ವಾಹನಗಳು ಮತ್ತು ಒಂದು ಓಮ್ನಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು, ಹನಗೋಡು, ಬಿಳಿಕೆರೆ, ರಾಮನಾಥಪುರ ಮತ್ತಿತರ ಕಡೆಗಳಲ್ಲಿ ಈತ ವಾಹನಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದು ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಯತ್ನ ಆರೋಪದಡಿ ವಿರಾಜಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ಓಮ್ನಿ ವಾಹನ ವಶಕ್ಕೆ ಪಡೆದಿದ್ದರು. ದರ್ಶನ್ ನಾಯಕ್ ಸೇರಿದಂತೆ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ವಶ ಪಡಿಸಿಕೊಂಡ ವಾಹನಗಳಿಗೆ ದಾಖಲೆ ಇಲ್ಲದಿರುವುದು ಕಂಡು ಬಂದಿದೆ. ಈ ನಡುವೆ ಪರಾರಿಯಾಗಿದ್ದ ಇಬ್ಬರಿಗಾಗಿ ತನಿಖೆ ಕೈಗೊಂಡಿದ್ದ ಪೊಲೀಸರು ದರ್ಶನ್ ನಾಯಕ್ ನನ್ನು ಪೆರುಂಬಾಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಐಷಾರಾಮಿ ಜೀವನಕ್ಕಾಗಿ ವಾಹನಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಹೊರ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ವಿರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಬಿ.ಎಸ್.ಶಿವರುದ್ರ ಅವರ ನೇತೃತ್ವದಲ್ಲಿ ವಿರಾಜಪೇಟೆ ನಗರ ಪ್ರಬಾರ ಠಾಣಾಧಿಕಾರಿ ವಾಣಿಶ್ರೀ ಎ.ಎಸ್.ಐ ಮಂಜು, ಸಿಬ್ಬಂದಿಗಳಾದ ಎಸ್.ಟಿ.ಗಿರೀಶ್, ಧರ್ಮ ಕೆ.ಎಂ, ಗ್ರಾಮಾಂತರ ಪೊಲೀಸ್ ಠಾಣೆಯ ಜೋಸ್ ನಿಶಾಂತ್, ಮೋಹನ್, ಸತೀಶ್, ಸುರೇಶ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.