Advertisement

ಮಳೆಗಾಲಕ್ಕೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಸೂಚನೆ

10:45 AM May 30, 2019 | Team Udayavani |

ಮಡಿಕೇರಿ: ಪ್ರಸಕ್ತ ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದಾಗಿ ಭೂಕುಸಿತ ಹಾಗೂ ಪ್ರವಾಹ ಸಂಭವಿಸಿದಲ್ಲಿ ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

Advertisement

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜೂನ್‌ ತಿಂಗಳಿನಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಎಲ್ಲಾ ರಕ್ಷಣಾ ಪಡೆಯ ತಂಡಗಳು ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧರಾಗಬೇಕಿದೆ ಎಂದು ತಿಳಿಸಿದರು.

ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಪ್‌, ಅಗ್ನಿಶಾಮಕ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು ರಕ್ಷಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಮಂಗಳೂರು ವಲಯ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಶಿವಶಂಕರ್‌ ಅವರು ಕಳೆದ ವರ್ಷ ಜೋಡುಪಾಲ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯದ ಅನುಭವವವನ್ನು ಹಂಚಿಕೊಂಡು ಸಾರ್ವಜನಿಕರ ರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಬಗ್ಗೆ ಮಾಹಿತಿ ನೀಡಿದರು. ಕಳೆದ ಬಾರಿ ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಮಾಹಿತಿ ಸಂವಹನದ ಕೊರತೆ ಎದುರಾದುದನ್ನು ಸಭೆಯ ಗಮನಕ್ಕೆ ತಂದರು.

ಕರ್ನಾಟಕ ಸಿವಿಲ್ ಡಿಫೆನ್ಸ್‌ ಕಮಾಂಡರ್‌ ಆದ ಡಾ.ಚೇತನ್‌ ಅವರು ಮಾತನಾಡಿ ಕಳೆದ ಬಾರಿ ಅತೀವೃಷ್ಟಿ ಸಂದರ್ಭದಲ್ಲಿ ಹಾಲೇರಿ, ದೇವಸ್ತೂರು, ಕಾಲೂರು, ಹಟ್ಟಿಹೊಳೆ, ಮಾದಾಪುರ ಹಾಗೂ ವಿವಿಧ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು. ಅತೀವೃಷ್ಟಿ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ತೇಲುವ ಸೇತುವೆ ನಿರ್ಮಾಣ, ಮಾನವ ರಹಿತ ಯಂತ್ರಚಾಲಿತ ದೋಣಿ ಬಳಕೆಯ ಬಗ್ಗೆ ಅವರು ಮಾಹಿತಿ ನೀಡಿದರು. ಎನ್‌ಡಿಆರ್‌ಎಫ್ನ ಅಧಿಕಾರಿ ಅತೀವೃಷ್ಟಿ ಸಂಭವಿಸುವ ಸಂದರ್ಭದಲ್ಲಿ ಯಾವ ರೀತಿ ರಕ್ಷಣೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅಗತ್ಯ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

Advertisement

ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ,ಪೆನ್ನೇಕರ್‌, ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಅಧಿಕಾರಿ (ಕಂದಾಯ ಇಲಾಖೆ) ವಿಶ್ವನಾಥ್‌, ಕರ್ನಾಟಕ ನಾಗರಿಕರ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್‌ ಪೋರ್ಸ್‌) ಚೇತನ್‌, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಾದ ಶಿವಶಂಕರ, ವೈ.ಎ.ಕೌಸರ್‌, ನೋಡಲ್ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದು ಪೂರಕ ಸಲಹೆ ಸೂಚನೆಗಳನ್ನುನೀಡಿದರು.

ಸ್ಥಳಾಂತರ
ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಅಧಿಕಾರಿ(ಕಂದಾಯ ಇಲಾಖೆ) ಡಾಙ ವಿಶ್ವನಾಥ್‌ ಅವರು ಮಾತನಾಡಿ ಪ್ರಕೃತಿ ವಿಕೋಪ, ಅತೀವೃಷ್ಟಿ ಎದುರಿಸುವ ಸಂಬಂಧ ಈಗಾಗಲೇ ಜಿಲ್ಲಾಡಳಿತ ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಅನಾಹುತ ಸಂಭವಿಸುವ ಮುನ್ನ ಬೇರೆಡೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು. ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಮಳೆ ಮುನ್ಸೂಚನೆಯ ವೈಜ್ಞಾನಿಕ ಮಾಹಿತಿಯನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಿಳಿಸುವ ಮೂಲಕ ಸಂಭವಿಸಬಹುದಾದಂತಹ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದಾಗಿದೆ. ಎಂದರು. ಅಗ್ನಿಶಾಮಕ ಇಲಾಖೆಯ ಮೈಸೂರು ವಿಭಾಗದ ಅಧಿಕಾರಿ ವೈ.ಎ.ಕೌಸರ್‌ ಅವರು ಮಾತನಾಡಿ ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜಾನುವಾರು ರಕ್ಷಣೆ ಮಾಡಬೇಕಿದೆ. ಬೋಟ್ ಸೇರಿದಂತೆ ಅಗತ್ಯ ಉಪಕರಣಗಳನ್ನು ಇಟ್ಟುಕೊಳ್ಳಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next