ಮಡಿಕೇರಿ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಸವಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಾಲೇಜ್‌ನ ಪ್ರಾಂಶುಪಾಲೆ ಪ್ರೊ| ವೈ.ಕೆ. ಚಿತ್ರಾ, ಉಪಾಧ್ಯಕ್ಷರಾಗಿ ಬಿ.ಪಿ.ಕಾಸ್ ಹಾಗೂ ಕಾರ್ಯದರ್ಶಿಯಾಗಿ ಕೆ.ಪಿ.ಪ್ರತಾಪ್ ಆಯ್ಕೆಯಾಗಿದ್ದಾರೆ.
ಸಂಘದ ರಚನೆ ಸಂಬಂಧ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.ಇನ್ನು ಸಹ ಕಾರ್ಯದರ್ಶಿಯಾಗಿ ಸಲ್ಮಾ ಖಾನಂ, ಖಜಾಂಚಿಯಾಗಿ ಎಂ. ಶಿವರಾಜ್ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಭೆಯ ಆರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ಡಾ| ಕೆ.ಸಿ. ದಯಾನಂದ ಅವರು ಮಾತನಾಡಿ, ಕಾಲೇಜು ಪ್ರಾರಂಭವಾಗಿ 12 ವರ್ಷ ಕಳೆದರೂ ಹಳೆ ವಿದ್ಯಾರ್ಥಿ ಸಂಘ ಇನ್ನು ರಚನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಈ ಬಗ್ಗೆ ಹಲವು ಬಾರಿ ಸಭೆ ನಡೆಸಿ ಚರ್ಚೆಯಾಗಿದ್ದರೂ ಇನ್ನು ಕಾರ್ಯೋನ್ಮುಖವಾಗಿಲ್ಲ. ಇನ್ನು ಮುಂದೆ ಹಳೆಯ ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೋರಿದರು.
2019-20ನೇ ಸಾಲಿನಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಮಡಿಕೇರಿ ಎಂದು ನೋಂದಣಿ ಮಾಡಿಸಿ ಇನ್ನು ಹೆಚ್ಚಿನ ಸದಸ್ಯರು ನೇಮಿಸಿ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಾಲೇಜ್‌ನ ಪ್ರಾಂಶುಪಾಲೆ ಪ್ರೊ| ವೈ.ಕೆ. ಚಿತ್ರಾ ಅವರು ಮಾತನಾಡಿ, ನೂತನ ಸಮಿತಿಯು ಮುಂದಿನ ಅಧಿಕಾರಾವಧಿಯಲ್ಲಿ ಕಾಲೇಜಿನ ಪ್ರಗತಿ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುವುದು ಮತ್ತು ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಕಳಕಳಿ ಸೇರಿದಂತೆ ಸೇವಾ ಮನೋಭಾವದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ನೋಂದಣಿ ಕಾರ್ಯ ಶೀಘ್ರ ಆಗಬೇಕು, ಕನಿಷ್ಠ ಎರಡು ತಿಂಗಳಿಗೊಮ್ಮೆ ಹಾಗೂ ತುರ್ತು ಸಂದರ್ಭದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಸಂಘದ ಪ್ರಾಧ್ಯಾಪಕ ಬಿ.ಆರ್. ಶಶಿಧರ್, ಪದಾಧಿಕಾರಿಗಳಾದ ಎಂ.ಜಿ. ದೀಪಕ್, ಬಿ.ಆರ್. ಕಾರ್ತಿಕ್, ಬಿ.ಎನ್. ಸುಮಂತ್, ಚರಣ್ ರಾಜ್, ಪವನ್ ಕುಮಾರ್, ಲಿಕ್ಕಿತಾ, ಪ್ರಿಯಾ ಉಪಸ್ಥಿತರಿದ್ದರು.