ಮಡಿಕೇರಿ: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಹೃದಯ ಭಾಗದಲ್ಲಿ ಹರಿಯುತ್ತಿರುವ ತೋಡಿನ ತುಂಬಾ ತ್ಯಾಜ್ಯ ತುಂಬಿ ದುರ್ವಾಸನೆ ಬೀರುತ್ತಿದ್ದು, ನಗರಸಭೆ ಮೂಲಕ ಚರಂಡಿ ಸ್ವತ್ಛಗೊಳಿಸುವ ಕಾರ್ಯ ನಡೆಯಿತು.
ನಗರದ ಗ್ರೀನ್ ಸಿಟಿ ಫೋರಂ ಸಂಘಟನೆ ನಗರಸಭೆ ಗಮನ ಸೆಳೆಯುವುದರ ಮೂಲಕ ಚರಂಡಿ ಸ್ವತ್ಛಗೊಳಿಸಲು ಮುಂದಾಗಿತ್ತು. ಸಕಾರತ್ಮಕವಾಗಿ ಸ್ಪಂದಿಸಿದ ನಗರಸಭೆ ಶನಿವಾರ ಚರಂಡಿ ಸ್ವತ್ಛತಾ ಕಾರ್ಯ ಕೈಗೆತ್ತಿಕೊಂಡಿತು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಹರಿಯುತ್ತಿರುವ ಚರಂಡಿ ಸ್ವತ್ಛಗೊಳಿಸುವ ಕಾರ್ಯದಲ್ಲಿ ಪೌರಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡರು. ಚರಂಡಿಯಲ್ಲಿದ್ದ ಬಾಟಲಿಗಳು ಸೇರಿದ್ದಂತೆ ಶೇಖರಣೆಗೊಂಡಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಜೆಸಿಬಿ ಯಂತ್ರದ ಮೂಲಕ ಚರಂಡಿಯಲ್ಲಿದ್ದ ತ್ಯಾಜ್ಯಗಳನ್ನು ಹೊರ ತೆಗೆಯಲಾಯಿತು. ಚರಂಡಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಯಲಾಯಿತು.
ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಸದಸ್ಯ ಪ್ರಕಾಶ್ ಆಚಾರ್ಯ, ಪೌರಾಯುಕ್ತ ಬಿ.ರಮೇಶ್ ಚರಂಡಿ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಕಾರತ್ಮಕವಾಗಿ ಸ್ಪಂದಿಸಿ, ಸ್ಥಳಕ್ಕೆ ಆಗಮಿಸಿದರು. ಪಟ್ಟಣದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ಕಳಕಳಿ ವ್ಯಕ್ತ ಪಡಿಸುತ್ತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು. ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವತ್ಛತೆ ಕಾಪಾಡಲು ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಖಜಾಂಚಿ ಕನ್ನಂಡ ಕವಿತಾ ಬೊಳ್ಳಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಮೋಂತಿ ಗಣೇಶ್, ಸವಿತಾ ಭಟ್ ಹಾಜರಿದ್ದರು.