Advertisement
ನವೀನ ತಂತ್ರಜ್ಞಾನದ ಮೂಲಕ ಕಥಾವಸ್ತುವನ್ನು ಪ್ರಸ್ತುತ ಪಡಿಸಿದ ಬೃಹತ್ ಮಂಟಪಗಳ ವರ್ಣರಂಜಿತ ಬೆಳಕಿನ ಚಿತ್ತಾರ ಇಡೀ ನಗರವನ್ನು ಆವರಿಸಿತ್ತು. ನಗರದ ಮುಖ್ಯ ರಸ್ತೆ ತುಂಬಾ ಜನಜಂಗುಳಿ ಇತ್ತು. ದಶಮಂಟಪಗಳ ಡಿಜೆ ಸಂಗೀತಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು.
Related Articles
Advertisement
ಕರವಲೆ ಭಗವತಿ ಮಹಿಷ ಮರ್ದಿನಿ ದೇಗುಲ ಮಂಟಪ ಸಮಿತಿ 24ನೇ ವರ್ಷದ ದಸರಾ ಉತ್ಸವದಲ್ಲಿ ಭ್ರಮರಾಂಬಿಕೆಯಿಂದ ಅರುಣಾಸುರ ವಧೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿತು. ದೇಚೂರು ರಾಮ ಮಂದಿರ ಸಮಿತಿ 101ನೇ ವರ್ಷದ ಉತ್ಸವದಲ್ಲಿ ಪಂಚಮುಖೀ ಆಂಜನೇಯನ ಕಥಾ ಸಾರಾಂಶವನ್ನು ಪ್ರದರ್ಶಿಸಿತು.
ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಯೊಂದಿಗೆ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಸಾರಾಂಶ, ಕೋಟೆ ಮಾರಿಯಮ್ಮ ದೇಗುಲದಸರಾ ಮಂಟಪ ಸಮಿತಿ 44ನೇ ವರ್ಷದ ಉತ್ಸವದಲ್ಲಿ ಹಯಗ್ರೀವನಿಂದ ಹಯಗ್ರೀವ ದಾನವನ ಸಂಹಾರ ಕಥಾ ಸಾರಾಂಶ, 150 ವರ್ಷಗಳ ಇತಿಹಾಸವಿರುವ ದಶಮಂಟಪಗಳ ಸಾರಥಿಯಾಗಿರುವ ಪೇಟೆ ಶ್ರೀರಾಮಮಂದಿರ ದೇಗುಲ ದಸರಾ ಮಂಟಪ ಸಮಿತಿ ಅರ್ಧನಾರೀಶ್ವರ ದರ್ಶನ ಕಥಾ ಸಾರಾಂಶ ಹಾಗೂ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯ ಅಕ್ಕಳೆಂದೆ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಚೌಟಿಮಾರಿಯಮ್ಮ ದೇವಾಲಯ ಮಂಟಪ ಸಮಿತಿಯು 46ನೇ ವರ್ಷದ ದಸರಾ ಮಂಟಪದಲ್ಲಿ ಸುಬ್ರಹ್ಮಣ್ಯನಿಂದ ತಾರಕಾಸುರನ ವಧೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದವು. ಈ ಬಾರಿ ದಶಮಂಟಪಗಳು ಬಹುಮಾನಕ್ಕಾಗಿ ಪೈಪೋಟಿ ನೀಡಿದ್ದವು.
ಕಾಲೇಜು ರಸ್ತೆಯ ರಾಮಮಂದಿರದ ಅರ್ಧನಾರೀಶ್ವನ ಕಲಾಕೃತಿಯನ್ನು ಹೊತ್ತ ಮಂಟಪದ ಮೆರವಣಿಗೆಯ ಆರಂಭದೊಂದಿಗೆ ಶೋಭಾಯಾತ್ರೆಗೆ ಚಾಲನೆ ದೊರಕಿತು. ಸಂಪ್ರದಾಯದಂತೆ ಪೇಟೆ ಶ್ರೀರಾಮ ಮಂದಿರ ಮಂಟಪ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮಾರಿಯಮ್ಮ ಮತ್ತು ಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿ ಪ್ರಜೆ ಸಲ್ಲಿಸುವುದರೊಂದಿಗೆ ನಾಲ್ಕು ಶಕ್ತಿ ದೇವತೆಗಳು ಸಹಿತ ಮಂಟಪಗಳ ಮೆರವಣಿಗೆ ಮಂಜಿನ ನಗರಿಯ ಇರುಳಿಗೆ ಬೆಳಕಿನ ರಂಗೋಲಿಯನ್ನು ಮೂಡಿಸಿತು.
ಶಕ್ತಿ ಮಂಟಪಗಳುಹಾಲೇರಿ ರಾಜವಂಶಸ್ಥರ ಆಳ್ವಿಕೆಯ ಅವಧಿಯಲ್ಲೆ ನಾಡಿನ ಸುಭಿಕ್ಷೆಗಾಗಿ ಪೂಜಿಸಲ್ಪಡುತ್ತಿದ್ದ ಶಕ್ತಿ ದೇವತೆಗಳ ಮಂಟಪಗಳು ದಸರಾ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿದರು. ನಗರದ ರಾಜಬೀದಿಗಳಲ್ಲಿ ಶೋಭಾಯಾತ್ರೆಯ ಸಂಭ್ರಮ ಮನೆ ಮಾಡಿತ್ತಾದರೆ, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿನ ಮಂಗಳೂರಿನ ಸ್ವರಾಗ್ ಸೌಂಡ್ಸ್ ಆರ್ಕೆಸ್ಟ್ರಾ ಗಮನ ಸೆಳೆಯಿತು. ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಚಿದ ಲೇಸರ್ ಶೋ, ಡಾ. ಶ್ರೀ ವಿದ್ಯಾ ಮುರಳೀಧರ್ ಸೌರಭ ಕಲಾ ತಂಡದಿಂದ ನೃತ್ಯ ವರ್ಷ, ಕುಕ್ಕೆ ಸುಬ್ರಹ್ಮಣ್ಯದ ಆರ್ಟ್ ಇನ್ ಮೋಷನ್ ಕಲಾ ತಂಡದಿಂದ ಡ್ಯಾನ್ಸ್ ಶೋ ಆಕರ್ಷಕವಾಗಿ ಮೂಡಿಬಂದಿತು.