ಮಡಿಕೇರಿ: ಅಮ್ಮನ ನೆನಪುಗಳ ಬುತ್ತಿಯಂತಿದ್ದ ಮೊಬೈಲ್ ಫೋನ್ ಕೊನೆಗೂ ಹೃತಿಕ್ಷಾಳಿಗೆ ಸಿಕ್ಕಿದೆ. ಕೋವಿಡ್ ಸೋಂಕಿಗೆ ಬಲಿಯಾದ ಅಮ್ಮನ ಜತೆಯಲ್ಲಿ ಅವರ ಮೊಬೈಲನ್ನು ಕೂಡ ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಈ ಪುಟ್ಟ ಬಾಲೆಗೆ ಸರಿ ಸುಮಾರು ಮೂರು ತಿಂಗಳ ಅನಂತರ ಹೆತ್ತಾಕೆ ಬಿಟ್ಟು ಹೋದ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ದೊರೆತಿದೆ.
ಕುಶಾಲನಗರದ ಗುಮ್ಮನ ಕೊಲ್ಲಿಯ ನಿವಾಸಿ ನವೀನ್ ಅವರ ಪತ್ನಿ ಪ್ರಭಾ ಮೇ 6ರಂದು ಕೊರೊನಾ ಸೋಂಕಿಗೆ ಒಳಗಾಗಿ ಮೇ 16ರಂದು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಸಂದರ್ಭ ಪ್ರಭಾ ಅವರಿಗೆ ಸೇರಿದ ಮೊಬೈಲ್ ನಾಪತ್ತೆಯಾಗಿತ್ತು. ಅಮ್ಮನೊಂದಿಗಿದ್ದ ಹಲವಾರು ಫೋಟೋಗಳನ್ನು ಹೊಂದಿದ್ದ ಮೊಬೈಲ್ ಕಾಣೆಯಾದದ್ದು ಅವರ ಏಕಮಾತ್ರ ಪುತ್ರಿ ಹೃತಿಕ್ಷಾ ಹಾಗೂ ಕುಟುಂಬದ ಸದಸ್ಯರ ಅಪಾರ ದುಃಖಕ್ಕೆ ಕಾರಣವಾಗಿತ್ತು.
ಈ ಹಂತದಲ್ಲಿ ಪುಟ್ಟ ಬಾಲೆೆ ಹೃತಿಕ್ಷಾ ಜಿಲ್ಲಾಡಳಿತಕ್ಕೆ ಪತ್ರವೊಂದನ್ನು ಬರೆದು, ಅಮ್ಮನ ಮೊಬೈಲ್ ದೊರಕಿಸಿಕೊಡುವಂತೆ ಮನವಿ ಮಾಡಿದ್ದಳು. ಮೂರು ತಿಂಗಳ ಬಳಿಕ ಮಡಿಕೇರಿ ನಗರ ಠಾಣೆಯಿಂದ ಬಂದ ಫೋನ್ ಕರೆ ಹೃತಿಕ್ಷಾ ಹಾಗೂ ಆಕೆಯ ಕುಟುಂಬದ ಸದಸ್ಯರನ್ನು ಅಚ್ಚರಿಕೆ ತಳ್ಳಿದೆ.
ಮಡಿಕೇರಿ ಕೋವಿಡ್ ಆಸ್ಪತ್ರೆಯ ಗೋದಾಮು ಬಳಿಯಲ್ಲಿ ಕಂಡು ಬಂದ ಮೊಬೈಲನ್ನು ಆಸ್ಪತ್ರೆಯ ಸಿಬಂದಿ ಮಡಿಕೇರಿ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ. ಗುರುವಾರ ಬೆಳಗ್ಗೆ ಠಾಣೆಗೆ ಮಾವ ಟಿ.ಕೆ. ಸಂತೋಷ್ ಅವರೊಂದಿಗೆ ತೆರಳಿದ ಹೃತಿಕ್ಷಾ ಮೊಬೈಲ್ ಪರಿಶೀಲಿಸಿ, ಅದರಲ್ಲಿದ್ದ ಅಮ್ಮನ ಫೋಟೋಗಳನ್ನು ನೋಡಿ ನೋವಿನೊಂದಿಗೆ ಸಂಭ್ರಮಿಸಿದಳು. ಹೃತಿಕ್ಷಾಳಿಗೆ ಎಸ್‌ಪಿ ಅವರು ಚಾಕಲೇಟ್ ನೀಡುವ ಮೂಲಕ ಸಂತಸ ಹಂಚಿಕೊಂಡರು. ನಗರ ವೃತ್ತ ನಿರೀಕ್ಷಕ ವೆಂಕಟೇಶ್, ಠಾಣಾಧಿಕಾರಿ ಅಂತಿಮ ಗೌಡ ಹಾಜರಿದ್ದರು.
ಆ. 10ರಂದು ಕೋವಿಡ್ ಆಸ್ಪತ್ರೆಯ ಗೋದಾಮನ್ನು ಸ್ವತ್ಛಗೊಳಿಸುವ ಸಂದರ್ಭ ಒಂದು ಮೊಬೈಲ್ ದೊರಕಿದ್ದು, ಪೊಲೀಸರಿಗೆ ಹಸ್ತಾಂತರಿಸಿದ್ದರು. ಐಎಂಐ ನಂಬರ್ ಪರಿಶೀಲಿಸಿದಾಗ ಕಾಣೆಯಾಗಿದ್ದ ಮೊಬೈಲ್ ಇದುವೇ ಎಂಬುದು ಖಚಿತವಾಯಿತು. ಪ್ರಕರಣ ದಾಖಲಾದ ದಿನದಿಂದಲೇ ತನಿಖೆ ನಡೆಸುತ್ತಿದ್ದೆವು. ಮೊಬೈಲ್ ದೊರಕಿರುವುದು ತುಂಬಾ ಖುಷಿಯಾಗಿದೆ; ಇನ್‌ಬಿಲ್ಟ್ ಮೆಮೋರಿಯಲ್ಲಿದ್ದ ಎಲ್ಲ ಡಾಟಾಗಳು ಮತ್ತು ಮೃತ ಪ್ರಭಾ ಅವರ ಫೋಟೋಗಳು ಸುರಕ್ಷಿತವಾಗಿವೆ
– ಕ್ಷಮಾಮಿಶ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ