Advertisement

Madikeri Dasara 2023: ದಶಮಂಟಪ ಶೋಭಾಯಾತ್ರೆಯ ಆಕರ್ಷಣೆ

11:55 PM Oct 25, 2023 | Team Udayavani |

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ 10 ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಕರ್ಷಕ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ವರ್ಣರಂಜಿತ ತೆರೆ ಬಿದ್ದಿದೆ.

Advertisement

ಈ ಬಾರಿ ದಶಮಂಟಪಗಳಲ್ಲಿ “ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ’ ಕಥಾ ಸಾರಾಂಶ ಹೊಂದಿದ್ದ ಶ್ರೀ ಕೋದಂಡ ರಾಮ ದೇವಾಲಯದ ಮಂಟಪ ಪ್ರಥಮ ಬಹುಮಾನ‌ ಗಳಿಸಿತು.

49ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಈ ದೇವಾಯದ ಮಂಟಪದ ಅಧ್ಯಕ್ಷರಾಗಿ ಗೋಪಿನಾಥ್‌ ಕಾರ್ಯ ನಿರ್ವಹಿಸಿದರು. ಸುಮಾರು 20 ಲಕ್ಷ ರೂ. ವೆಚ್ಚದ ಮಂಟಪ 25 ಕಲಾಕೃತಿಗಳನ್ನು ಹೊಂದಿತ್ತು.

“ಮಹಾಗಣಪತಿಯಿಂದ ಶತಮಾಹಿಷೆಯ ಸಂಹಾರ’ ಕಥಾ ಸಾರಾಂಶವನ್ನು ಹೊಂದಿ 47ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡ ಶ್ರೀ ಕೋಟೆ ಮಹಾಗಣಪತಿ ದೇವಾಲಯದ ಮಂಟಪ ಹಾಗೂ 48ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡು “ಕೃತಿಬಾಸ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ’ ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ದ್ವಿತೀಯ ಬಹುಮಾನವನ್ನು ಹಂಚಿಕೊಂಡವು.

ಶ್ರೀ ಕೋಟೆ ಮಹಾಗಣಪತಿ ಮಂಟಪಕ್ಕಾಗಿ ಸುಮಾರು 31.5 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, 30 ಕಲಾಕೃತಿಗಳಿದ್ದವು. ಅಧ್ಯಕ್ಷರಾಗಿ ಎಚ್‌.ಪಿ. ಲೋಕೇಶ್‌ ಕಾರ್ಯನಿರ್ವಹಿಸಿದರು.

Advertisement

ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಮಂಟಪದ ಅಧ್ಯಕ್ಷರಾಗಿ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ಕಾರ್ಯನಿರ್ವಹಿಸಿದರು. ಸುಮಾರು 25 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಮಂಟಪದಲ್ಲಿ 17 ಕಲಾಕೃತಿಗಳಿದ್ದವು.

28ನೇ ವರ್ಷದ ದಸರಾ ಉತ್ಸವ ಆಚರಿಸಿಕೊಂಡು ಉಗ್ರನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯದ ಮಂಟಪ ತೃತೀಯ ಬಹುಮಾನ ಗಳಿಸಿತು. ಪಿ.ಜಿ. ಗಜೇಂದ್ರ (ಕುಶ) ಅಧ್ಯಕ್ಷತೆಯಲ್ಲಿ ನಿರ್ಮಿಸಲಾದ ಮಂಟಪಕ್ಕೆ ಸುಮಾರು 22 ಲಕ್ಷ ರೂ. ಖರ್ಚು ಮಾಡಲಾಗಿದ್ದು, 22 ಕಲಾಕೃತಿಗಳಿದ್ದವು. ಉಳಿದ ಮಂಟಪಗಳು ಕೂಡ ಬಹುಮಾನಕ್ಕಾಗಿ ತೀವ್ರ ಪೈಪೋಟಿ ನೀಡಿ ಸಾವಿರಾರು ಜನರ ಮನಗೆದ್ದವು.

ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳ ಸಾರಥಿ ಎಂದೇ ಖ್ಯಾತಿ ಪಡೆದಿರುವ 150 ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಂಟಪದಲ್ಲಿ ವೈಕುಂಠ ದರ್ಶನ ಕಥಾ ಸಾರಾಂಶವನ್ನು ಪ್ರದರ್ಶಿಸಿತು.

ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 105ನೇ ವರ್ಷದ ದಸರಾ ಉತ್ಸವದಲ್ಲಿ ವಿಷ್ಣುವಿನಿಂದ ಮಧು ಖೈಟಭರ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿ ಗಮನ ಸೆಳೆಯಿತು.
ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ 61ನೇ ವರ್ಷದ ದಸರಾ ಉತ್ಸವದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತೆ¾ ಕಥಾ ಸಾರಾಂಶವನ್ನು ಪ್ರದರ್ಶಿಸಿತು.

ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 60ನೇ ವರ್ಷದ ಉತ್ಸವದಲ್ಲಿ ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿತು.

ನಾಲ್ಕು ಶಕ್ತಿ ದೇವತೆಗಳ ಹಿರಿಯ ಅಕ್ಕಳೆಂದೆ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಶ್ರೀ ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6 ರಿಂದ 10ರವರೆಗಿನ ಕದಂಬ ಕೌಶಿಕೆ ಕಥಾ ಸಾರಾಂಶವನ್ನು ಪ್ರದರ್ಶಿಸಿತು.

ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯವರಾ ಮಂಟಪ ಸಮಿತಿ 93ನೇ ದಸರಾ ಉತ್ಸವದಲ್ಲಿ ಪರಶಿವನಿಂದ ಜಲಂಧರ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿ ಜನಮೆಚ್ಚುಗೆಗೆ ಪಾತ್ರವಾಯಿತು.ಬಹುಮಾನ ವಿಜೇತ ಸಮಿತಿಗಳ ಪ್ರಮುಖರು ಗಣ್ಯರಿಂದ ಬಹುಮಾನ ಪಡೆದು ವಿಜೃಂಭಿಸಿದರು.

ಕರಗೋತ್ಸವಕ್ಕೆ ತೆರೆ
ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ರಮುಖ ಧಾರ್ಮಿಕ ಪಾತ್ರ ವಹಿಸುವ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವಕ್ಕೆ ಶ್ರದ್ಧಾಭಕ್ತಿಯ ತೆರೆ ಬಿತ್ತು. ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ಕರಗಗಳು ದಶಮಂಟಪಗಳಿಗೆ ಪೂಜೆ ಸಲ್ಲಿಸಿ ಮತ್ತು ಪೂಜೆ ಪಡೆದು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಕರಗೋತ್ಸವವನ್ನು ಸಂಪನ್ನಗೊಳಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next