Advertisement

Madikeri ದಶಮಂಟಪ ಶೋಭಾಯಾತ್ರೆ ವೇಳೆ ಅವಘಡ: ಮಗುಚಿದ ಟ್ರ್ಯಾಕ್ಟರ್‌; ತಪ್ಪಿದ ಅನಾಹುತ

12:19 AM Oct 26, 2023 | Team Udayavani |

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪದ ಟ್ರ್ಯಾಕ್ಟರ್‌ ಮಗುಚಿದ ಪರಿಣಾಮ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.

Advertisement

ಗಾಯಾಳುಗಳು ಮಡಿ ಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ ವಿದ್ಯುತ್‌ ದೀಪಾಲಂಕಾರಕ್ಕಾಗಿ ಬಂದಿದ್ದ ದಿಂಡಿಗಲ್‌ ನ ವ್ಯಕ್ತಿಯೊಬ್ಬರ ಕಾಲು ಮೂಳೆ ಮುರಿದಿದೆ. ಅದೃಷ್ಟವಶಾತ್‌ ಘಟನೆ ವೇಳೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪವು ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿತ್ತು. ದುರ್ಗಾ ಸಪ್ತಶತಿ ಪುರಾಣದಿಂದ ಅಧ್ಯಾಯ 6ರಿಂದ 10ರ ವರೆಗಿನ “ಕದಂಬ ಕೌಶಿಕೆ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು.
ಬಹುಮಾನಕ್ಕಾಗಿ ತೀರ್ಪುಗಾರರಿಗೆ ಬೆಳಗ್ಗೆ 4 ಗಂಟೆ ವೇಳೆಗೆ ಕಾವೇರಿ ಕಲಾಕ್ಷೇತ್ರದ ಬಳಿ ಕಥಾ ಸಾರಾಂಶವನ್ನು ಪ್ರದರ್ಶಿಸಬೇಕಾಗಿತ್ತು.

ರಾಜಾಸೀಟು ಉದ್ಯಾನವನದ ಬಳಿ ಇರುವ ದೇವಾಲಯದಿಂದ ಹೊರಟ ಮಂಟಪ ನಸುಕಿನ ವೇಳೆ 3.30ರ ಸುಮಾರಿಗೆ ಡಿಸಿಸಿ ಬ್ಯಾಂಕ್‌ ಮುಂಭಾಗದಿಂದ ಸಾಗುತ್ತಿತ್ತು. ಇಳಿಜಾರು ರಸ್ತೆಯಲ್ಲಿ ಎಡಬದಿಗೆ ವಾಲಿದ ಟ್ರ್ಯಾಕ್ಟರ್‌ ದಿಢೀರನೆ ಮಗುಚಿಕೊಂಡಿತು. ಟ್ರ್ಯಾಕ್ಟರ್‌ನಲ್ಲಿದ್ದ ದೇವಿಯ ಬೃಹತ್‌ ಕಲಾಕೃತಿಗಳು ಹಾಗೂ ವಿದ್ಯುತ್‌ ಅಲಂಕೃತವಾದ ಎತ್ತರದ ಬೋರ್ಡ್‌ಗಳು ಕೂಡ ರಸ್ತೆಗೆ ಬಿದ್ದವು. ಘಟನೆ ವೇಳೆ ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಪೊಲೀಸರು, ಚೆಸ್ಕಾಂ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಮಂಟಪ ಸಮಿತಿಯ ಪದಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಹೆಚ್ಚಿನ ಅಪಾಯ ಎದುರಾಗುವುದನ್ನು ತಪ್ಪಿಸಿದರು. ವಿದ್ಯುತ್‌ ಮಾರ್ಗದಲ್ಲಿ ತತ್‌ಕ್ಷಣ ವಿದ್ಯುತ್‌ ಸರಬರಾಜನ್ನು ಸ್ಥಗಿತಗೊಳಿಸಲಾಯಿತು. ಮಂಟಪದ ಬಳಿ ನೆರೆದಿದ್ದ ಸಾವಿರಾರು ಜನರು ದೊಡ್ಡ ಅನಾಹುತದಿಂದ ಪಾರಾದರು.

Advertisement

ದಶಮಂಟಪಗಳ ಶೋಭಾಯಾತ್ರೆಯಲ್ಲಿ ಹರ್ಷೋದ್ಘಾರದೊಂದಿಗೆ ಕುಣಿದು ಸಂಭ್ರಮಿಸುತ್ತಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮಂದಿ ಅನಿರೀಕ್ಷಿತವಾಗಿ ನಡೆದು ಹೋದ ಈ ಘಟನೆಯಿಂದ ಆತಂಕಗೊಂಡರು. ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯ ಸದಸ್ಯರು ತಮ್ಮ ಮೂರು ತಿಂಗಳ ಪರಿಶ್ರಮ ವ್ಯರ್ಥವಾದ ಬಗ್ಗೆ ಘಟನೆ ನಡೆದ ಸ್ಥಳದಲ್ಲಿ ಕಣ್ಣೀರು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next