Advertisement

ಮಡಿಕೇರಿ ನಗರಸಭೆ ಸಭೆ: ರಸ್ತೆಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ 

02:37 PM Mar 18, 2017 | |

ಮಡಿಕೇರಿ: ಯುಜಿಡಿ ಯೋಜನೆಯ ಮೂಲಕ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವಿರುದ್ಧ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ ಗುತ್ತಿಗೆದಾರರ ಬಿಲ್‌ಗ‌ಳನ್ನು ಪಾಸ್‌ ಮಾಡದಂತೆ ಸಭೆ ನಿರ್ಣಯ ಕೈಗೊಂಡಿದೆ.

Advertisement

ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪûಾತೀತ ವಾಗಿ ಯುಜಿಡಿ ಯೋಜನೆಯ ವಿರುದ್ಧ ಅಸಮಾಧಾನ ವ್ಯಕ್ತವಾಯಿತು. ಒಳಚರಂಡಿ ಕಾಮಗಾರಿಯಿಂದಾಗಿ ನಗರದ ರಸ್ತೆಗಳೆಲ್ಲವೂ ಹದಗೆಟ್ಟು ಪಾದಾಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯಾರ್ಥಿಗಳು ಹಾಗೂ ದ್ವಿಚಕ್ರ ವಾಹನ ಚಾಲಕರು ಬಿದ್ದು ಆಸ್ಪತ್ರೆ ಸೇರಿದ ಘಟನೆಗಳು ನಡೆದಿವೆ. ಉತ್ತಮ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆಯೇ ಹೊರತು ಯುಜಿಡಿ ಯಿಂದ ನಗರಕ್ಕೆ ಯಾವುದೇ ಪ್ರಯೋಜನವಿಲ್ಲವೆಂದು ಬಹುತೇಕ ಸದಸ್ಯರು ಆರೋಪಿಸಿದರು. 

ವಿನಾಕಾರಣ ಒಳಚರಂಡಿ ವ್ಯವಸ್ಥೆಯ ನೆಪದಲ್ಲಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದ್ದು, ಉದ್ದೇಶಿತ ಯೋಜನೆ ಸಫ‌ಲವಾಗುವ ಯಾವುದೇ ಸಾಧ್ಯತೆಗಳಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಶೌಚಾಲಯದ ತ್ಯಾಜ್ಯ ನೀರು ಏರುತಗ್ಗಿನ ಪ್ರದೇಶದಲ್ಲಿ ಹೇಗೆ ಹರಿದು ಹೋಗಲು ಸಾಧ್ಯವೆಂದು ಪ್ರಶ್ನಿಸಿದರು. ಸಭೆಯಲ್ಲಿದ್ದ ಯುಜಿಡಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು ಪವರ್‌ ಪಾಯಿಂಟ್‌ ಮೂಲಕ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಸುವಂತೆ ಒತ್ತಾಯಿಸಿದರು.
 
ಪವರ್‌ ಪಾಯಿಂಟ್‌ ಮಾಹಿತಿಗೆ 3 ದಿನಗಳ ಮುಂಚಿತ ವಾಗಿ ಕೋರಿಕೆ ಸಲ್ಲಿಸಬೇಕೆಂದ ಅಧಿಕಾರಿ ಯುಜಿಡಿ ಕುರಿತು ವಿವರಿಸಿದರು. ನಗರದ ಒಟ್ಟು 115 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣ ಮತ್ತು ಪೈಪ್‌ ಅಳವಡಿಕೆಗೆ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 40 ಕಿ.ಮೀ ವ್ಯಾಪ್ತಿಯ ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು. 

ಯಾವ ಪ್ರದೇಶದಲ್ಲಿ ತ್ಯಾಜ್ಯ ಸರಾಗವಾಗಿ ಹರಿಯು ವುದಿಲ್ಲವೋ ಅಂಥ ಪ್ರದೇಶದಲ್ಲಿ ಸೆಪ್ಟಿಕ್‌ ಟ್ಯಾಂಕ್‌ಗಳ ವ್ಯವಸ್ಥೆಯನ್ನು ಮಾಡಲಾಗುವುದು. ಒಟ್ಟು 9 ಸೆಪ್ಟಿಕ್‌ ಟ್ಯಾಂಕ್‌ಗಳು ನಿರ್ಮಾಣಗೊಳ್ಳಲಿವೆ. ಯುಜಿಡಿ ಯೋಜನೆಯನ್ನು ಹೈಟೆಕ್‌ ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ ಎಂದು ಅಧಿಕಾರಿ ಗಮನ ಸೆಳೆದರು.

ಕೇಬಲ್‌ ಅಳವಡಿಕೆ: 2.40 ಕೋಟಿ ರೂ. ಬರಬೇಕು
ಯುಜಿಡಿ ಪೈಪ್‌ಲೈನ್‌ನ ಚರಂಡಿಗಳ ಮೂಲಕವೇ ಖಾಸಗಿ ದೂರವಾಣಿ ಸಂಸ್ಥೆಯ ಕೇಬಲ್‌ ಅಳವಡಿಸ ಲಾಗುತ್ತಿದ್ದು, ಇದಕ್ಕೆ ನಗರಸಭೆ ಅನುಮತಿ ಇದೆಯೇ ಎಂದು ಎಸ್‌ಡಿಪಿಐ ಸದಸ್ಯ ಮನ್ಸೂರ್‌ ಪ್ರಶ್ನಿಸಿದರು. ಇವರ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್‌ ಸದಸ್ಯರು ಕೇಬಲ್‌ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. 

Advertisement

ಈ ಸಂದರ್ಭ ಮಾತನಾಡಿದ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಕೇಬಲ್‌ ಅಳವಡಿಕೆಗೆ ನಗರಸಭೆಯಿಂದ ಅನುಮತಿ ನೀಡಿಲ್ಲವೆಂದು ಸ್ಪಷ್ಟಪಡಿಸಿದರು. 

ಯುಜಿಡಿ ಅಧಿಕಾರಿ ಮಾತನಾಡಿ, ಚರಂಡಿಗಳನ್ನು ತೆಗೆಯುವ ಸಂದರ್ಭ ದುರಸ್ಥಿಗೀಡಾದ ಕೇಬಲ್‌ಗ‌ಳನ್ನು ಪುನರ್‌ ಅಳವಡಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಸದಸ್ಯರು ಎಲ್ಲಾ ಕಡೆ ಕೇಬಲ್‌ ಅಳವಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತರಾದ ಬಿ. ಶುಭಾ ಮಾತನಾಡಿ, ಕೇಬಲ್‌ ಅಳವಡಿಕೆಗೆ ನಗರಸಭೆ ಸಂಬಂಧಿಸಿದ ಸಂಸ್ಥೆಯಿಂದ ರೂ.50 ಲಕ್ಷ ಪಾವತಿಸಿಕೊಂಡಿದೆ ಎಂದರು. ಕೇಬಲ್‌ ಅಳವಡಿಕೆ ಪರ ಮಾತನಾಡಿದ ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌ ಹಾಗೂ ಬಿಜೆಪಿ ಸದಸ್ಯರು ಪೌರಾಯುಕ್ತರು ದೊಡ್ಡ ಮೊತ್ತದ ಹಣವನ್ನೇ ಸಂಗ್ರಹಿಸಿದ್ದಾರೆ ಎಂದು ಶಹಭಾಸ್‌ಗಿರಿ ನೀಡಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು ನಿಯಮದ ಪ್ರಕಾರ ಒಂದು ಮೀಟರ್‌ ದೂರಕ್ಕೆ ಸಾವಿರ ರೂಪಾಯಿಯನ್ನು ಸಂಗ್ರಹಿಸಬೇಕಾಗಿದ್ದು, ಈ ಪ್ರಕಾರವಾಗಿ ಹೆಚ್ಚಿನ ಮೊತ್ತದ ಹಣ ಸಂದಾಯವಾಗಬೇಕೆಂದರು.

ಕಾಂಗ್ರೆಸ್‌ ಸದಸ್ಯ ಎಚ್‌.ಎಂ. ನಂದಕುಮಾರ್‌ ಮಾತನಾಡಿ, ಒಂದು ಮೀಟರ್‌ಗೆ ಒಂದು ಸಾವಿರ ರೂ. ನಂತೆ 24 ಕಿ.ಮೀ ಗೆ 2.40 ಕೋಟಿ ರೂ.ಗಳನ್ನು ನಗರಸಭೆ ಸಂಗ್ರಹಿಸಬೇಕಾಗಿದ್ದು, ಇಷ್ಟು ಮೊತ್ತವನ್ನು ಸಂಗ್ರಹಿಸದಿದ್ದರೆ ನಿಯಮ ಉಲ್ಲಂಘಸಿದ ಆರೋಪವನ್ನು ಪೌರಾಯುಕ್ತರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next