ಮಡಿಕೇರಿ: ಕೊಡಗು ಮಾತ್ರವಲ್ಲದೇ ಕೆಲವು ಹೊರ ಜಿಲ್ಲೆಗಳಲ್ಲೂ ಮನೆಮಾತಾಗಿರುವ ಜಿಲ್ಲೆಯ ರೇಡಿಯೋ ಕೇಂದ್ರ ಮಡಿಕೇರಿ ಆಕಾಶವಾಣಿ 25 ವಸಂತಗಳನ್ನು ಪೂರೈಸಿ 26ರ ಹರೆಯಕ್ಕೆ ಕಾಲಿಟ್ಟಿದೆ. 1993ರ ಆಗಸ್ಟ್ 28ರಂದು ಅಧಿಕೃತವಾಗಿ ಪ್ರಸಾರ ಕಾರ್ಯ ಆರಂಭಿಸಿದ ಮಡಿಕೇರಿ ಬಾನುಲಿ ಕೇಂದ್ರ ಪ್ರಾರಂಭಿಕವಾಗಿ ಸಂಜೆ 6.30ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮಗಳನ್ನು ಬಿತ್ತರಿಸಿತು. ಕ್ರಮೇಣ ಬೆಳಗ್ಗಿನ ಹಾಗೂ ಮಧ್ಯಾಹ್ನದ ಪ್ರಸಾರಕ್ಕೆ ನಾಂದಿ ಹಾಡಿ ಪೂರ್ಣಪ್ರಮಾಣದ ಬಾನುಲಿ ಕೇಂದ್ರವಾಗಿ ಹೊರಹೊಮ್ಮಿತು. ಪ್ರಸ್ತುತ, ಮುಂಜಾನೆ 5.55ರಿಂದ ರಾತ್ರಿ11.05ರವರೆಗೆ ನಿರಂತರ ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ.
ಆರಂಭದಲ್ಲಿ ಸಾಂಪ್ರದಾಯಿಕವಾಗಿ ಕೃಷಿರಂಗ, ಯುವವಾಣಿ, ಮಹಿಳಾ ಲೋಕ, ಚಿಣ್ಣರಲೋಕ, ಆರೋಗ್ಯ ದರ್ಶನ, ಕ್ರೀಡಾಲಹರಿ, ಕಾನೂನು ಸಲಹೆ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡವು. ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ‘ಕೊಡವಸಿರಿ’, ಸ್ಥಳೀಯ ಸುದ್ದಿಗಳ ‘ಸುದ್ದಿ ಸಂಚಯ’ ಪ್ರಸಾರ ಮಾಡಿ ಕೇಳುಗರಿಗೆ ಶಿಕ್ಷಣ, ಮಾಹಿತಿ, ಮನರಂಜನೆ ಒದಗಿಸುವಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರ ಯಶಸ್ವಿಯಾಯಿತು.
ಆದರೆ, 2003ರಲ್ಲಿ ನಿಲಯ ನಿರ್ದೇಶಕಿಯಾಗಿ ನೇಮಕಗೊಂಡ ಇಂದಿರಾ ಏಸುಪ್ರಿಯ ಗಜರಾಜ್ ಅವರು ರೇಡಿಯೋ ಕಾರ್ಯಕ್ರಮಗಳಿಗೆ ಹೊಸ ರೂಪ ತಂದುಕೊಡಲು ಮುಂದಾದರು. ಜಿಲ್ಲೆಯ ಜನರ ಸಂಸ್ಕೃತಿ, ಭಾಷೆ, ಆಶೋತ್ತರಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲು ನಿಲಯದ ಸಿಬಂದಿಗೆ ಮಾರ್ಗದರ್ಶನ ನೀಡಿದರು. ಇದರ ಫಲವಾಗಿಯೇ ಜಿಲ್ಲೆಯ ಮೂಲೆಮೂಲೆಗಳಿಗೆ ಹೊರಟ ‘ಕಾವೇರಿ ಎಕ್ಸ್‌ಪ್ರೆಸ್’, ಹಳ್ಳಿಗಳನ್ನು ಪರಿಚಯಿಸಿದ ‘ಹಳ್ಳಿ ರೇಡಿಯೋ’, ಪೌರಾಣಿಕ ಪಾತ್ರಗಳನ್ನು ತೆರೆದಿಟ್ಟ ‘ಪುರಾಣ ಯಾನ’, ಕೌಟುಂಬಿಕ ಸಂಭಾಷಣೆಯ ‘ಪಳಮೆ ಪೊಮ್ಮಾಲೆ’, ಕನ್ನಡ ನಾಡು ನುಡಿಗೆ ದುಡಿದವರನ್ನು ಪರಿಚಯಿಸಿದ “ನಾಡ ಕಣ್ಮಣಿಗಳು’, ಕೊಡವ-ತುಳು-ಬ್ಯಾರಿ ಮಿಶ್ರಿತ ಹರಟೆಯ ‘ಬಾರಿ ಒಂತೆ ಮಾತಾಡಮ’, ಕೊಡಗಿನ ಪಕ್ಷಿಗಳ ಕುರಿತಾದ ‘ಕೊಡಗಿನ ಬಾನಾಡಿಗಳು’, ಕಾವೇರಿ ತೀರ್ಥೋದ್ಭವ ಹಾಗೂ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದ ನೇರ ವೀಕ್ಷಕ ವಿವರಣೆ, ಯುವ ಕೇಳುಗರನ್ನು ಆಕರ್ಷಿಸಿದ ‘ಎಫ್.ಎಮ್. ಸ್ಟೈಲ್’, ಕನ್ನಡ ಸಿನಿಮಾರಂಗದ ಕುರಿತಾದ ‘ಚಿತ್ರರಂಜನೆ’, ವಿಶೇಷ ಅತಿಥಿಗಳೊಂದಿಗಿನ ಸಂದರ್ಶನದ ‘ಸಂಡೇ ಚಾಟ್ ಶೋ’, ಕೇಳುಗರ ಕೋರಿಕೆಯ ‘ಚಿತ್ರಕಾವೇರಿ’, ಯುವ ಪೀಳಿಗೆಯ ‘ಗೇಮ್ ಶೋ’, ಹಿಂದಿ ಚಿತ್ರಗೀತೆಗಳ ‘ಬಾಲಿವುಡ್ ಮೆಲಡೀಸ್’ ಹೀಗೆ ಪುಂಖಾನುಪುಂಖವಾಗಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮಡಿಕೇರಿ ಬಾನುಲಿ ಕೇಂದ್ರ ಸಾಕ್ಷಿಯಾಯಿತು. ಆಕಾಶವಾಣಿಯ ಧ್ಯೇಯ ವಾಕ್ಯವಾದ ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಆಶಯಕ್ಕೆ ತಕ್ಕಂತೆ ಕೊಡವ ಭಾಷೆಯ ‘ಸುದ್ದಿ ಸಮಾಚಾರ’, ಅರೆಭಾಷೆಯ ‘ಸುದ್ದಿ ಜೊಂಪೆ’, ಬ್ಯಾರಿ ಭಾಷೆಯ ‘ಸುದ್ದಿ ಸಾರ’ ಎಂಬ ಸ್ಥಳೀಯ ವಾರ್ತೆಗಳು, ಅಲ್ಲದೇ ನಿಧನ ಸುದ್ದಿಯ ಪ್ರಸಾರಕ್ಕೂ ಇಂದಿರಾ ಅವರು ಅವಕಾಶ ಮಾಡಿಕೊಟ್ಟರು. ಆ ನಂತರದಲ್ಲಿ ಮೂಡಿಬಂದ ‘ನಮಸ್ಕಾರ ಭಾರತೀಸುತ’, ‘ಚೈತನ್ಯಲಹರಿ’, ‘ಯೋಗಜ್ಜಾನ ಮಾರ್ಗ’ ಹೀಗೆ ಈ ಎಲ್ಲ ಜನಪ್ರಿಯ ಕಾರ್ಯಕ್ರಮಗಳಿಂದಾಗಿ ಟಿ.ವಿ. ಮಾಧ್ಯಮಗಳ ಪೈಪೋಟಿಯ ನಡುವೆಯೂ ಮಡಿಕೇರಿ ಆಕಾಶವಾಣಿ ಕೇಂದ್ರ ತನ್ನ ಆಧಿಪತ್ಯ ಸ್ಥಾಪಿಸುವಲ್ಲಿ ಸಾಫಲ್ಯ ಸಾಧಿಸಿದೆ. ನೆರೆಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹಾಸನ, ಮೈಸೂರು ಜಿಲ್ಲೆಗಳಲ್ಲೂ ಅಪಾರ ಶ್ರೋತೃಗಳನ್ನು ಸಂಪಾದಿಸಿರುವ ಮಡಿಕೇರಿ ಬಾನುಲಿ ಕೇಂದ್ರ ಸುಮಾರು 75ರಿಂದ 100 ಕಿ.ಮೀ.ವರೆಗೆ ತನ್ನ ಪ್ರಸಾರ ವ್ಯಾಪ್ತಿಯನ್ನು ಹೊಂದಿದೆ. 2010ರಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ 2 ರಾಷ್ಟ್ರೀಯ ಹಾಗೂ 3 ರಾಜ್ಯ ಪ್ರಶಸ್ತಿಗಳು ಮಡಿಕೇರಿ ಕೇಂದ್ರಕ್ಕೆ ಲಭಿಸಿವೆ.
ಪ್ರಸ್ತುತ ನಿಲಯದ ಕಾರ್ಯಕ್ರಮ ನಿರ್ವಾಹಕ ಟಿ.ಕೆ. ಉಣ್ಣಿಕೃಷ್ಣನ್, ಎಸ್.ಸುಬ್ರಹ್ಮಣ್ಯ, ಪ್ರಸಾರ ನಿರ್ವಾಹಕ ಬಿ. ದಿಗ್ವಿಜಯ್, ಉದ್ಘೋಷಕರಾದ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ, ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರ ಶ್ರೀನಿವಾಸನ್ ಅವರು ಪ್ರಸಾರ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಹಲವು ತಾತ್ಕಾಲಿಕ ಉದ್ಘೋಷಕರು, ವಾರ್ತಾವಾಚಕರು ಬಾನುಲಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಂತ್ರಸ್ತರ ಸಂಕಟಕ್ಕೊದಗಿಬಂದ ಬಾನುಲಿ ಸಾಂತ್ವನ
ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ನೊಂದವರ ನೆರವಿಗೆ ‘ಸಂತ್ರಸ್ತ ಕೊಡಗಿಗೆ ಬಾನುಲಿ ಸಾಂತ್ವನ’ ಎಂಬ ವಿಶೇಷ ಲೈವ್ ಕಾರ್ಯಕ್ರಮದ ಮೂಲಕ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಿದ ಮಡಿಕೇರಿ ಆಕಾಶವಾಣಿ, ಮೊಬೈಲ್ ನೆಟ್ ವರ್ಕ್ ಇಲ್ಲದ ಕುಗ್ರಾಮಗಳಿಗೆ ಸಂದೇಶಗಳನ್ನು ತಲುಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿ ಜನಮನ್ನಣೆ ಗಳಿಸಿದೆ.