ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲು ಮೂಲಕ ಮಾದಿಗ ಸಮಾಜಕ್ಕೆ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಮಾದಿಗ ದಂಡೋರಾ ಕರ್ನಾಟಕ ಸಮಿತಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದೆ ಎಂದು ತೆಲಂಗಾಣ ಮಾದಿಗ ಸಮಾಜದ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.
ಶುಕ್ರವಾರ ನಗರದಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನೆ ಸಚಿವ ಮುರುಗನ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಪರ ಮಾದಿಗ ಸಮಾಜ ಬೆಂಬಲಕ್ಕೆ ನಿಂತು, ಪ್ರಚಾರ ಮಾಡಲು ನಿರ್ಧರಿಸಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಬೊಮ್ಮಾಯಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದೆ. ಕೇಂದ್ರ ಕೂಡ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದರು.
ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮಾದಿಗರ ಬಹಿರಂಗ ಸಭೆಗೆ ಆಗಮಿಸಿ ನೀಡಿದ ಭರವಸೆ ಈಡೇರಿಸಲಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೂ ಸಮಾಜದ ಶೋಷಿತರಲ್ಲೇ ತುಳಿತಕ್ಕೊಳಗಾದ ಮಾದಿಗ ಸಮುದಾಯವನ್ನು ಮೇಲೆತ್ತುವ ವಿಷಯದಲ್ಲಿ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಬದ್ಧತೆ ತೋರಿದೆ. ಮಾದಿಗರು ಕೂಡ ನಮ್ಮ ನೆರವಿಗೆ ಬಂದಿರುವ ಬಿಜೆಪಿ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ನಮ್ಮ ಸಮಾಜದ ಬದ್ಧತೆ, ಕೃತಜ್ಞತೆ ತೋರಬೇಕಿದೆ ಎಂದು ಮನವಿ ಮಾಡಿದರು.
ಒಳ ಮೀಸಲು ಕಲ್ಪಿಸುವಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ನಾರಾಯಣಸ್ವಾಮಿ ಬಹುದೊಡ್ಡ ಹೆಜ್ಜೆ ಇರಿಸಿದ್ದಾರೆ. ಬಿಜೆಪಿ ಸರ್ಕಾರ ನಮ್ಮ ಸಮುದಾಯದ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಕಾರಣ ಮಾದಿಗ ಸಮಾಜ ಕೂಡ ಬಿಜೆಪಿ ಪರವಾಗಿ ನಿಲ್ಲಬೇಕಿರುವುದು ನೈತಿಕ ಧರ್ಮ. ಸರ್ಕಾರದ ಬದ್ಧತೆಗೆ ನಮ್ಮ ಸಮಾಜ ಕೂಡ ಬಿಜೆಪಿ ಪಕ್ಷದ ಪರವಾಗಿ ಚುನಾವಣೆಯಲ್ಲಿ ಬದ್ಧತೆ ತೋರಲಿದೆ ಎಂದರು.
ಮಾದಿಗರ ಒಳ ಮೀಸಲು ನೀಡುವ ಕುರಿತು ಕಾಂಗ್ರೆಸ್ ಮೋಸ ಮಾಡಿದೆ. ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಮಾದಿಗರ ಸಮಾವೇಶದಲ್ಲಿ ಭಾಗವಹಿಸಿ, ನೀಡಿದ ಭರವಸೆ ಈಡೇರಿಸದೇ ಮೋಸ ಮಾಡಿದರು ಎಂದು ಟೀಕಾ ಪ್ರಹಾರ ನಡೆಸಿದರು.
ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಈಗಾಗಲೇ ಒಳ ಮೀಸಲು ವರ್ಗೀಕರಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಇದೀಗ ಕರ್ನಾಟಕ ರಾಜ್ಯವೂ ಒಳ ಮೀಸಲು ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ರಾಜ್ಯಗಳು ಸಲ್ಲಿಸಿರುವ ಒಳ ಮೀಸಲು ಕುರಿತು ಪಂಜಾಬ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯದಲ್ಲಿ ಕೈಗೊಂಡ ನಿರ್ಣಯ ಕೋರ್ಟ್ ಮೋರೆ ಹೋದ ಕಾರಣ ಕಾನೂನು ಸಂಘರ್ಷ ಸ್ಥಿತಿಯಲ್ಲಿವೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ರಾಜ್ಯ ಉಪಾಧ್ಯಕ್ಷ ಎಂ.ಶಂಕ್ರಪ್ಪ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವೆಂಕಟೇಶ ದೊಡ್ಡೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.