ನೆಲಮಂಗಲ: ಅರಿಶಿನಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಣ್ಣ ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ 9 ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ತಿಲಕ್‌ನಗರದ ವಿಶ್ವನಾಥ್, ತ್ಯಾಗರಾಜನಗರದ ಕೆ.ಪ್ರಸಾದ್(30), ಮಾರತ್‌ಹಳ್ಳಿಯ ಆರ್.ಮಂಜೇಶ್, ಚಂದ್ರನ್, ರಮೇಶ್, ಬೊಮ್ಮನಹಳ್ಳಿಯ ಸಿ.ಅಶ್ವತ್ಥ್(23), ಚಿಕ್ಕಮಗಳೂರು ಜಿಲ್ಲೆ ಲಕ್ಯ ಹೋಬಳಿಯ ಬೂದೇಶ್‌ಗೌಡ(44), ಆಂಧ್ರ ಪ್ರದೇಶದ ಹಿಂದೂಪುರ ತಾಲೂಕಿನ ಸಂತೆಬಿದನೂರಿನ ಎಂ.ಎಚ್.ಸುರೇಶ್‌ಬಾಬು(28) ಹಾಗೂ ದೊಡ್ಡಬಳ್ಳಾಪುರ ಶಾಂತಿ ನಗರದ ಆರ್.ರಮೇಶ್(42) ಬಂಧಿತ ಆರೋಪಿಗಳು.
ಸೊಂಡೇಕೊಪ್ಪ ರಸ್ತೆಯ ಹೊನ್ನಗಂಗಯ್ಯನಪಾಳ್ಯದಲ್ಲಿರುವ ಅರಿಶಿನಕುಂಟೆ ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ ಅವರ ಮನೆಯಲ್ಲಿ ಇದೆ. ಫೆ.1ರಂದು ದರೋಡೆ ನಡೆದಿತ್ತು. ಮಧ್ಯಾಹ್ನ ರಾಜಣ್ಣ ಅವರ ಪತ್ನಿ ಸುಧಾಮಣಿ ಅವರು ಮನೆಯಲ್ಲಿ ಒಬ್ಬರೆ ಇದ್ದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿದ್ದರು. ನಕಲಿ ಗನ್ ತೋರಿಸಿ, ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಬಂಧಿತರೆಲ್ಲರೂ ಹೊರಗಿನವರೇ. ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯರ ಕೈವಾಡವಿರುವ ಶಂಕೆ ಇದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಬೇಕಾಗಿದೆ ಎಂದರು.
ಕದ್ದ ಚಿನ್ನಾಭರಣ: ಒಂದು ಚಿನ್ನದ ಲಾಂಗ್ ಚೈನ್, ಮೂರು ನೆಕ್ಲೇಸ್, 5 ಜೊತೆ ಚಿನ್ನದ ಓಲೆ, ಹ್ಯಾಂಗಿಂಗ್ಸ್, 6 ಚಿನ್ನದ ಕೈಬಳೆ, ಮಕ್ಕಳ 2 ಚಿನ್ನದ ಚೈನ್, 8 ಉಂಗುರ, ಮಕ್ಕಳ ಚಿನ್ನದ ಕೈ ಚೈನ್, ಸಣ್ಣ ಒಡವೆ ಸೇರಿದಂತೆ ಸುಮಾರು 750 ಗ್ರಾಂ ತೂಕದ 23 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಜೊತೆಗೆ ಕೃತ್ಯಕ್ಕೆ ಬಳಸಿದ ಸ್ಯಾಂಟ್ರೊ ಕಾರು, ಬುಲೆಟ್, ಒಂದು ನಕಲಿ ಪಿಸ್ತೂಲ್, ಸೂð ಡೈವರ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎ.ಬಿ. ರಾಜೇಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ನಾಗರಾಜು, ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಿ.ಎಸ್.ಅಶೋಕ್, ಮಂಜುನಾಥ್, ಅಮರೇಶ್‌ಗೌಡ, ಬಾಲಾಜಿಸಿಂಗ್, ಮೋಹನ್‌ಕುಮಾರ್, ಶ್ರೀನಿವಾಸ್, ಬಸವರಾಜು, ಹನಿಮಂತರಾಜು, ಬೆಟ್ಟಸ್ವಾಮಿ, ನಾಗೇಶ್, ಮಲ್ಲಿಕಾರ್ಜುನ್, ಚನ್ನೇಗೌಡ ಹಾಗೂ ಇತರೆ ಸಿಬ್ಬಂದಿ ಇದ್ದರು.
ಪಿಎಸ್‌ಐ ಪುತ್ರನೂ ಆರೋಪಿ!
ಪ್ರಮುಖ ಆರೋಪಿ ಬೆಂಗಳೂರಿನ ತಿಲಕ್‌ನಗರದ ವಿಶ್ವನಾಥ್ ಪಿಎಸ್‌ಐ ಪುತ್ರ ಎನ್ನಲಾಗಿದೆ. ತಿಲಕ್‌ನಗರ ಠಾಣೆಯಲ್ಲಿ ಪಿಎಸ್‌ಐ ಆಗಿರುವ ಮುನಿಕೃಷ್ಣ ಅವರ ಪುತ್ರನಾಗಿರುವ ವಿಶ್ವನಾಥ್, ಎಂಜಿನಿಯರಿಂಗ್ ವಿದ್ಯಾರ್ಥಿ. ಮೋಜು ಮಸ್ತಿಗೆ ಹಣ ಹೊಂದಿಸಲು ಈತ ಕಳ್ಳತನಕ್ಕಿಳಿದಿದ್ದ ಎಂದು ಹೇಳಲಾಗಿದೆ.