ಭೋಪಾಲ್: ಹಲವು ದಿನಗಳ ರಾಜಕೀಯ ಹಗ್ಗಜಗ್ಗಾಟದ ನಂತರ ಇಂದು ವಿಶ್ವಾಸಮತ ಯಾಚನೆಗೆ ಕಮಲ್ ನಾಥ್ ಸರಕಾರ ಸಿದ್ದವಾಗಿದೆ. ಇದಕ್ಕೂ ಮೊದಲು ಕಾಂಗ್ರೆಸ್ ನ 16 ಜನ ಶಾಸಕರು ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.
ಸದ್ಯ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿರುವ 16 ಜನ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಮಧ್ಯಪ್ರದೇಶ ಸ್ಪೀಕರ್ ಎನ್ ಪಿ ಪ್ರಜಾಪತಿ ಸ್ವೀಕರಿಸಿದ್ದು, ಇದರೊಂದಿಗೆ ಮಧ್ಯಪ್ರದೇಶ ವಿಧಾನಸಭೆಯ ಸಂಖ್ಯಾಬಲ 206ಕ್ಕೇರಿದೆ.
ಶುಕ್ರವಾರ ಸಂಜೆ 5 ಗಂಟೆಯ ಒಳಗೆ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರು ಎನ್ನಲಾದ 22 ಶಾಸಕರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅವರಲ್ಲಿ ಆರು ಮಂದಿ ಸಚಿವರಾಗಿದ್ದ ಕಾರಣ ಅವರ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನದ ರಾಜೀನಾಮೆಯನ್ನು ಸ್ಪೀಕರ್ ಈ ಮೊದಲೇ ಸ್ವೀಕರಿಸಿದ್ದರು.
206 ಸಂಖ್ಯಾಬಲದ ವಿಧಾನ ಸಭೆಯಲ್ಲಿ ಬಹುಮತಕ್ಕೆ 104 ಸದಸ್ಯರ ಅಗತ್ಯವಿದೆ. ಸದ್ಯ ಕಾಂಗ್ರೆಸ್ ನ 92 ಶಾಸಕರು, 4 ಪಕ್ಷೇತರರು, ಎರಡು ಬಿಎಸ್ ಪಿ ಮತ್ತು ಓರ್ವ ಸಮಾಜವಾದಿ ಶಾಸಕರ ಬೆಂಬಲ ಸರಕಾರಕ್ಕಿದೆ. ಆದರೆ ಬಿಜೆಪಿಗೆ 107 ಶಾಸಕರ ಬೆಂಬಲವಿದ್ದು, ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸರಕಾರ ಸೋಲನುಭವಿಸುವುದು ಬಹುತೇಕ ಖಚಿತ.