ಭೋಪಾಲ್: ಸೈಕೋಪಾತ್ ಕಿಲ್ಲರ್ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಐವರು ಪೊಲೀಸರು ಗಾಯಗೊಂಡಿದ್ದಾರೆ.
ಸೈಕೋಪಾತ್ ಕಿಲ್ಲರ್ ಆರೋಪಿ ಗುಜರಾತ್ ನ ದಾಹೋದ್ ನಿವಾಸಿ ದಿಲೀಪ್ ದೇವಾಲ್ ಎನ್ ಕೌಂಟರ್ ಗೆ ಬಲಿಯಾಗಿದ್ದು, ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಆರು ಕೊಲೆ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ರತ್ಲಾಮ್ ನಲ್ಲಿ ನವೆಂಬರ್ 25ರಂದು ಚೋಟಿ ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ಜನರು ಪಾಲ್ಗೊಂಡಿದ್ದ ವೇಳೆ ಇದೇ ಅವಕಾಶ ಬಳಸಿಕೊಂಡಿದ್ದ ನಟೋರಿಯಸ್ ಕಿಲ್ಲರ್ ದೇವಾಲ್, ಮನೆಯೊಂದಕ್ಕೆ ನುಗ್ಗಿ ಮೂವರನ್ನು (ಪತಿ, ಪತ್ನಿ ಮತ್ತು ಮಗಳು) ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರ ನೀಡಿದ್ದಾರೆ.
ಅಂದು ರಾತ್ರಿ ದೀಪಾವಳಿ ಪಟಾಕಿ ಶಬ್ದದ ಸಂದರ್ಭವನ್ನು ಉಪಯೋಗಿಸಿಕೊಂಡು ದೇವಾಲ್ ಮತ್ತು ಆತನ ಸಹಚರರು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ಜೂನ್ ತಿಂಗಳಿನಲ್ಲಿ ದೇವಾಲ್ ಮಹಿಳೆಯೊಬ್ಬರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವುದಾಗಿಯೂ ವರದಿ ತಿಳಿಸಿದೆ.
ರತ್ಲಾಮ್ ನಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ತನಗೆ ಸೇರಿದ್ದ ಜಾಗವನ್ನು ಮಾರಾಟ ಮಾಡಿದ್ದು, ಆ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಕಿಲ್ಲರ್ ದೇವಾಲ್ ಮಾಹಿತಿ ಪಡೆದುಕೊಂಡು ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿದ್ದ ಎಂದು ವರದಿ ಹೇಳಿದೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳಾದ ಅನುರಾಗ್ ಮೇಹಾರ್ (25ವರ್ಷ), ಗೌರವ್ ಬಿಲ್ವಾಲ್ (22ವರ್ಷ) ಮತ್ತು ಲಾಲಾ ಭಾಬೋರ್ (20ವರ್ಷ) ನನ್ನು ಬಂಧಿಸಲಾಗಿದೆ.