ಉಜ್ಜೈನ್(ಮಧ್ಯಪ್ರದೇಶ): ತುರ್ತು ನಿಗಾ ಘಟಕ(ಐಸಿಯು)ದ ಕೀ ಎಲ್ಲಿದೆ ಎಂದು ಹುಡುಕಲು ಆಸ್ಪತ್ರೆಯ ಸಿಬ್ಬಂದಿ ವಿಫಲರಾದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ 55 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದಿಂದಾಗಿ ಗುರುವಾರ ರಾತ್ರಿ ಉಜ್ಜೈನ್ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿತ್ತು. ಆದರೆ ಆಕೆಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ವೈದ್ಯರು ಮಾಧವ್ ನಗರದಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ರೋಗಿಗೆ ಕೋವಿಡ್ 19 ಸೋಂಕು ಇದೆಯಾ ಎಂದು ಪರೀಕ್ಷಿಸಲು ಕಳುಹಿಸಿರುವುದಾಗಿ ವರದಿ ಹೇಳಿದೆ.
ಕೊನೆಗೆ ಮಹಿಳೆಯನ್ನು ಉತ್ತಮ ವ್ಯವಸ್ಥೆ ಇರುವ ಆರ್ ಡಿ ಗಾರ್ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ 55 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೀಗ ಹಾಕಲಾಗಿತ್ತು. ಅಲ್ಲದೇ ಆಸ್ಪತ್ರೆಯಲ್ಲಿ ಅದಕ್ಕೆ ಸಂಬಂಧಿಸಿದ ಸಿಬ್ಬಂದಿಯೂ ಇರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
ಐಸಿಯುನ ಬೀಗ ಸಿಗದೆ ಇದ್ದಾಗ ಕೊನೆಗೆ ಐಸಿಯುನ ಬೀಗ ಮುರಿಯಲಾಗಿತ್ತು. ಆದರೆ ಅಷ್ಟರಲ್ಲಿ ರೋಗಿಯ ಆರೋಗ್ಯ ವಿಷಮ ಸ್ಥಿತಿಗೆ ತಲುಪಿ ಸಾವನ್ನಪ್ಪಿದ್ದರು ಎಂದು ವರದಿ ವಿವರಿಸಿದೆ. ಕೊನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವಿಪರೀತ ಒತ್ತಡ, ಡಯಾಬಿಟೀಸ್ ನಂತಹ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಕೋವಿಡ್ 19 ಸೋಂಕು ಇದೆಯಾ ಎಂದು ಪರೀಕ್ಷಿಸಲು ರಕ್ತ, ಗಂಟಲು ದ್ರವದ ಮಾದರಿಯನ್ನು ಕೊಂಡೊಯ್ದಿದ್ದರು. ಆದರೆ ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇವೆ ಎಂದು ಉಜ್ಜೈನ್ ಮುಖ್ಯ ವೈದ್ಯಾಧಿಕಾರಿ ಅನುಸೂಯ ಗೌಳಿ ತಿಳಿಸಿದ್ದಾರೆ.