ಭೋಪಾಲ್: ಇತ್ತೀಚೆಗೆ ನೂತನವಾಗಿ ರಚನೆಯಾದ ಮಧ್ಯಪ್ರದೇಶ ಬಿಜೆಪಿ ಸರ್ಕಾರವು ಇದೀಗ ಸಂಪುಟ ವಿಸ್ತರಣೆ ಮುಂದಾಗಿದೆ. ಇಂದು ಮಧ್ಯಾಹ್ನ 3.30ರ ಸುಮಾರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ಮೊದಲ ಸಂಪುಟ ವಿಸ್ತರಣೆ ನಡೆಯಲಿದೆ.
ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗಿನ ಸಭೆಗಳ ನಂತರ ನಿನ್ನೆ ಮುಖ್ಯಮಂತ್ರಿ ಮೋಹನ್ ಯಾದವ್ ಇದನ್ನು ಖಚಿತಪಡಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಾದವ್, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನೇತೃತ್ವದಲ್ಲಿ 2024 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.
ಕನಿಷ್ಠ 20 ಮಂದಿ ಶಾಸಕರು ಸಚಿವರಾಗಿ ಮೋಹನ್ ಯಾದವ್ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಸಂಭಾವ್ಯರ ಪೈಕಿ ಮಾಜಿ ಕೇಂದ್ರ ಸಚಿವ ಮತ್ತು ನರಸಿಂಗ್‌ಪುರದ ಶಾಸಕ ಪ್ರಹ್ಲಾದ್ ಸಿಂಗ್ ಪಟೇಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಇಂದೋರ್ 1 ಸ್ಥಾನದ ಶಾಸಕ ಕೈಲಾಶ್ ವಿಜಯವರ್ಗಿಯಾ, ಜಗದೀಶ್ ದೇವೋರಾ (ಡಿಸಿಎಂ), ರಾಜೇಂದ್ರ ಶುಕ್ಲಾ (ಡಿಸಿಎಂ), ಸಾಗರ್ ಜಿಲ್ಲೆಯ ರಾಹ್ಲಿ ಶಾಸಕ ಮತ್ತು ಮಾಜಿ ಸಚಿವಗೋಪಾಲ್ ಭಾರ್ಗವ, ಶಾಸಕರಾದ ಪ್ರದ್ಯುಮಾನ್ ಸಿಂಗ್ ತೋಮರ್, ಕೃಷ್ಣ ಗೌರ್, ರಾಮೇಶ್ವರ್ ಶರ್ಮಾ, ಕಮಲ್ ಮಾರ್ಸ್ಕೋಲ್, ಗಾಯತ್ರಿ ಪವಾರ್, ಘನಶ್ಯಾಮ್ ಚಂದ್ರವಂಶಿ, ಸಂಪತಿಯ ಉಕೆ, ದಿನೇಶ್ ರೈ ಮುನ್ಮುನ್, ಅಭಿಲಾಷ್ ಪಾಂಡೆ, ರೀತಿ ಪಾಠಕ್ ಮತ್ತು ರಾಕೇಶ್ ಸಿಂಗ್ ಸೇರಿದ್ದಾರೆ.