ಭೋಪಾಲ್: ಕಾರು ಮತ್ತು ಟ್ರ್ಯಾಕ್ಟರ್ ಟ್ರಾಲಿ ನಡುವೆ ಢಿಕ್ಕಿ ಸಂಭವಿಸಿ ಸಚಿವರೊಬ್ಬರು ಗಾಯಗೊಂಡಿರುವ ಘಟನೆ ಭಿಂಡ್ ಜಿಲ್ಲೆಯ ಮಲನ್ಪುರ್ ಪ್ರದೇಶದಲ್ಲಿ ಮಂಗಳವಾರ (ಮೇ.30 ರಂದು) ನಡೆದಿದೆ.
ಮಧ್ಯ ಪ್ರದೇಶದ ನಗರಾಭಿವೃದ್ಧಿ ಮತ್ತು ವಸತಿ ಖಾತೆ ರಾಜ್ಯ ಸಚಿವರಾಗಿರುವ ಒಪಿಎಸ್ ಭಡೋರಿಯಾ ಅವರು ಮಂಗಳವಾರ ಮಧ್ಯಾಹ್ನ ಗ್ವಾಲಿಯರ್ನಿಂದ ಮೆಹಗಾಂವ್ಗೆ ತೆರಳುತ್ತಿದ್ದಾಗ ಅವರ ಕಾರು ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಅವರನ್ನು ತಕ್ಷಣವೇ ಗ್ವಾಲಿಯರ್ನ ಬಿರ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ಗಾಯವಾದ ಕಾರಣ ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ ಎಂದು ಡಾ. ತಿವಾರಿ ಹೇಳಿದ್ದಾರೆ.
ಘಟನೆಯಲ್ಲಿ ಸಚಿವರು ಮಾತ್ರವಲ್ಲದೆ,ಕಾರು ಚಾಲಕ ಮತ್ತು ಅವರೊಂದಿಗೆ ಬಂದ ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
Related Articles
ಮಂಗಳವಾರ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅಪಘಾತದಲ್ಲಿ ಸಚಿವರು ಮತ್ತು ಗಾಯಗೊಂಡ ಇತರರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.