ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬವರಿಗೆ ಬರೋಬ್ಬರಿ 3,419 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ಇದರ ಪರಿಣಾಮ ಆಕೆಯ ಮಾವ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರವೀಣ್ ಹತ್ಯೆ ಖಂಡಿಸಿದ ಸಿಎಂ ಬೊಮ್ಮಾಯಿ: ಕುಟುಂಬಸ್ಥರಿಗೆ ಪಾರ್ಥೀವ ಶರೀರ ಹಸ್ತಾಂತರ
ಮಧ್ಯಪ್ರದೇಶ ಸರ್ಕಾರದ ವಿದ್ಯುತ್ ಕಂಪನಿ, ಇದೊಂದು ಮಾನವ ದೋಷವಾಗಿದ್ದು, ಆ ತಪ್ಪನ್ನು ಸರಿಪಡಿಸಿ 1,300 ರೂಪಾಯಿ ಎಂದು ಪರಿಷ್ಕೃತ ಬಿಲ್ ನಲ್ಲಿ ನಮೂದಿಸಲಾಗಿದೆ. ಇದರಿಂದಾಗಿ ಗುಪ್ತಾ ಕುಟುಂಬದವರ ಆತಂಕ ದೂರವಾಗಿತ್ತು ಎಂದು ವರದಿ ವಿವರಿಸಿದೆ.
ಜುಲೈ ತಿಂಗಳ ಗೃಹ ಬಳಕೆಯ ವಿದ್ಯುತ್ ಬಿಲ್ ನ ಭಾರೀ ಮೊತ್ತ ಕಂಡು ನನ್ನ ತಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು ಎಂದು ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ತಿಳಿಸಿದ್ದಾರೆ.
ಈ ಬಗ್ಗೆ ದೂರು ನೀಡಿದ ನಂತರ ಜುಲೈ 20ರಂದು ನೀಡಿದ್ದ ವಿದ್ಯುತ್ ಬಿಲ್ ಬಗ್ಗೆ ಮಧ್ಯಪ್ರದೇಶದ ಮಧ್ಯ ಕ್ಷೇತ್ರ ವಿದ್ಯುತ್ ವಿತರಣ್ ಕಂಪನಿಯ ಪೋರ್ಟಲ್ ನಲ್ಲಿ ಪರಿಶೀಲಿಸಿದಾಗ, ಮೊತ್ತವನ್ನು ಸರಿಪಡಿಸಲಾಗುವುದು ಎಂದು ನಮೂದಾಗಿರುವುದಾಗಿ ಸಂಜೀವ್ ವಿವರಿಸಿದ್ದಾರೆ. ಕೊನೆಗೂ ವಿದ್ಯುತ್ ಇಲಾಖೆ ಮೊತ್ತವನ್ನು ಸರಿಪಡಿಸಿರುವುದಾಗಿ ತಿಳಿಸಿದ್ದಾರೆ.
ಇಲಾಖೆಯ ಸಿಬ್ಬಂದಿ ಗ್ರಾಹಕರ ನಂಬರ್ ನಮೂದಿಸುವ ವೇಳೆ ಸಾಫ್ಟ್ ವೇರ್ ಕಂಪನಿಯ ನಂಬರ್ ಬಳಸಿದ ಪರಿಣಾಮ ಗೃಹ ಬಳಕೆದಾರ ಗುಪ್ತಾ ಅವರಿಗೆ ಭಾರೀ ಮೊತ್ತದ ಬಿಲ್ ಬಂದಿತ್ತು. ಆ ಬಿಲ್ ಮೊತ್ತ 1,300 ರೂಪಾಯಿ ಎಂದು ಸರಿಪಡಿಸಿ ಗ್ರಾಹಕರಿಗೆ ಕಳುಹಿಸಲಾಗಿದೆ ಎಂದು ವಿದ್ಯುತ್ ಕಂಪನಿಯ ಜನರಲ್ ಮ್ಯಾನೇಜರ್ ನಿತೀನ್ ಮಂಗ್ಲಿಕ್ ಮಾಹಿತಿ ನೀಡಿದ್ದಾರೆ.