ಭೋಪಾಲ್:ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿದ ಗ್ರಾಮಸ್ಥರನ್ನು ರಕ್ಷಿಸಲು ಹೋಗಿದ್ದ ಸಚಿವರೇ ಅಪಾಯದಲ್ಲಿ ಸಿಲುಕಿ ಹಾಕಿಕೊಂಡು ಕೊನೆಗೆ ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ಮೋದಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿದೆ: ಅಣ್ಣಾಮಲೈ
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಡಾಟಿಯಾ ಜಿಲ್ಲೆಯ ಕೋಟ್ರಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬೋಟ್ ನಲ್ಲಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಏನಿದು ಘಟನೆ:
ಪ್ರವಾಹದಿಂದ ಕಂಗೆಟ್ಟಿದ್ದ ಕೋಟ್ರಾ ಗ್ರಾಮದಲ್ಲಿ ಜನರು ತಮ್ಮ ರಕ್ಷಣೆಗಾಗಿ ಮನೆಯ ಮಹಡಿ ಮೇಲೆ ಹತ್ತಿ ಕುಳಿತಿದ್ದು, ಅವರನ್ನು ರಕ್ಷಿಸಬೇಕೆಂದು ಗೃಹ ಸಚಿವ ಮಿಶ್ರಾ ಅವರಿಗೆ ಕೆಲವು ಜನರು ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಮಿಶ್ರಾ ಅವರು ರಾಜ್ಯ ವಿಪತ್ತು ನಿರ್ವಹಣಾ ತಂಡದ ಜತೆಗೂಡಿ ಬೋಟ್ ನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮರವೊಂದು ಬೋಟ್ ಮೇಲೆ ಬಿದ್ದ ಪರಿಣಾಮ ಬೋಟ್ ಮುಂದೆ ಚಲಿಸದಂತೆ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರನ್ನು ರಕ್ಷಿಸಲು ಹೋಗಿದ್ದ ಸಚಿವ ಮಿಶ್ರಾ ತಾನೇ ಖುದ್ದು ಅಪಾಯದಲ್ಲಿ ಸಿಲುಕಿರುವುದನ್ನು ಮನಗಂಡು ಕೂಡಲೇ ಸರ್ಕಾರಿ ಅಧಿಕಾರಿಗಳಿಗೆ ಸಂದೇಶದ ಮೂಲಕ ವಿಷಯ ತಿಳಿಸಿ, ಸ್ಥಳಕ್ಕೆ ಐಎಎಫ್ ಹೆಲಿಕಾಪ್ಟರ್ ಕಳುಹಿಸಿ ರಕ್ಷಿಸುವಂತೆ ಕೇಳಿಕೊಂಡಿದ್ದರು. ಆ ನಂತರ ಸ್ಥಳಕ್ಕೆ ಹೆಲಿಕಾಪ್ಟರ್ ಬಂದಿದ್ದು, ಅಪಾಯದಲ್ಲಿ ಸಿಲುಕಿದ್ದ ಒಂಬತ್ತು ಮಂದಿ ಗ್ರಾಮಸ್ಥರನ್ನು ಹಾಗೂ ಸಚಿವರನ್ನು ರಕ್ಷಣೆ ಮಾಡಲಾಯಿತು ಎಂದು ವರದಿ ವಿವರಿಸಿದೆ.