ಭೋಪಾಲ್ : ಗುಜರಾತ್, ಮಹಾರಾಷ್ಟ್ರದ ಬಳಿಕ ಇದೀಗ ಮಧ್ಯಪ್ರದೇಶ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಅನುಕ್ರಮವಾಗಿ ಶೇ.3 ಮತ್ತು ಶೇ.5ರಷ್ಟು ಇಳಿಸಿದೆ.
ಇದಲ್ಲದೆ ಪ್ರತೀ ಲೀಟರ್ ಡೀಸೆಲ್ ಮೇಲಿನ ಹೆಚ್ಚುವರಿ ಮೇಲ್ ತೆರಿಗೆಯನ್ನು (ಸೆಸ್) 1.50 ರೂ.ಗಳಷ್ಟು ಇಳಿಸಿದೆ.
ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರಗಳನ್ನು ಇಳಿಸಿ ನಿತ್ಯ ಬಳಕೆಯ ಈ ಇಂಧನವನ್ನು ಸ್ವಲ್ಪ ಮಟ್ಟಿಗೆ ಅಗ್ಗ ಮಾಡಿರುವ ಕಾರಣ ಜನರಿಗೆ ಇದು ದೀಪಾವಳಿ ಕೊಡುಗೆಯಾಗಿ ಪರಿಣಮಿಸಿದೆ.
ಕೇಂದ್ರದ ಕೋರಿಕೆಯನ್ನು ಈ ಮೂರು ರಾಜ್ಯಗಳು ಮನ್ನಿಸಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಇಳಿಸಿವೆಯಾದರೂ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಮಾತ್ರ “ಎಷ್ಟು ಮಾತ್ರಕ್ಕೂ ವ್ಯಾಟ್ ಇಳಿಸಲಾಗದು’ ಎಂದು ಖಡಾಖಂಡಿತವಾಗಿ ಹೇಳಿರುವುದು ನಿರಾಶಾದಾಯಕವಾಗಿದೆ.
ಮಧ್ಯಪ್ರದೇಶದ ಹಣಕಾಸು ಸಚಿವ ಜಯಂತ್ ಮಲೈಯಾ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರೊಂದಿಗೆ ಸಭೆಯ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಹಾಗೂ ಸೆಸ್ ಇಳಿಸಲಾಗಿರುವುದನ್ನು ಪ್ರಕಟಿಸಿದರು.