ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಕಿರಿಯ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ರ‍್ಯಾಗಿಂಗ್ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಇಂದೋರ್‌ನ ವೈದ್ಯಕೀಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುವ ರೀತಿಯನ್ನು ನೋಡಿ ಕಿರಿಯ ವಿದ್ಯಾರ್ಥಿಗಳು ಆಘಾತಕ್ಕೀಡಾಗಿದ್ದು, ಈ ಕುರಿತು ಯುಜಿಸಿ ಆ್ಯಂಟಿ ರ‍್ಯಾಗಿಂಗ್ ಸಹಾಯವಾಣಿಗೆ ಕರೆ ಮಾಡಿ ತಮಗಾದ ಭಯಾನಕ ಅನುಭವವನ್ನು ತೋಡಿಕೊಂಡಿದ್ದಾರೆ.
ಸರ್ಕಾರಿ ಮೆಡಿಕಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಜೂನಿಯರ್ಗಳ ತರಗತಿಗಳಿಗೆ ತೆರಳಿ ದಿಂಬುಗಳು ಮತ್ತು ಬ್ಯಾಚ್‌ಮೇಟ್‌ಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ನಟಿಸಲು ಸೂಚಿಸಿದ್ದಾರೆ. ಇದರಿಂದ ಕೆಲವರು ತೀವ್ರವಾಗಿ ಮುಜುಗರಗೊಂಡು ಆಘಾತಕ್ಕೀಡಾಗಿದ್ದಾರೆ. ಇನ್ನೂ ಕೆಲವರು ಸೀನಿಯರ್ಸ್ ಹೇಳಿದಂತೆ ಮಾಡಿ ನಗೆಪಾಟಲಿಗೀಡಾಗಿದ್ದಾರೆ.
ರ‍್ಯಾಗಿಂಗ್ ಕಾಟದಿಂದ ಈ ಹಿಂದೆ ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದಿವೆ. ಹೀಗಾಗಿ, ಶಾಲಾ- ಕಾಲೇಜುಗಳಲ್ಲಿ ರ‍್ಯಾಗಿಂಗ್ ನಿಷೇಧಿಸಲಾಗಿದ್ದರೂ, ಇಂದೋರ್‌ನ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ರ‍್ಯಾಗಿಂಗ್ ಇದೀಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಪ್ರವೀಣ್ ಹತ್ಯೆ ಖಂಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಸದಸ್ಯರು
ಕೆಲವು ಪ್ರಾಧ್ಯಾಪಕರಿಗೆ ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದು, ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡುವ ರ‍್ಯಾಗಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಕಾಲೇಜಿಗೆ ಯುಜಿಸಿ ಸೂಚಿಸಿದೆ.