Advertisement

ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಸಂಪುಟ ರಾಜೀನಾಮೆ

09:17 AM Mar 11, 2020 | Sriram |

ಬೆಂಗಳೂರು/ಭೋಪಾಲ: ಮಧ್ಯಪ್ರದೇಶದಲ್ಲಿ ನಡೆದ ಹಠಾತ್‌ ಬೆಳವಣಿಗೆಯಲ್ಲಿ ಸಿಎಂ ಕಮಲ್‌ನಾಥ್‌ ಸಂಪುಟದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

Advertisement

ಕಾಮರಾಜ್‌ ಸೂತ್ರ ಅನುಸರಿಸಲು ಮುಂದಾಗಿರುವ ಅವರು, ಭಿನ್ನಮತೀಯ ಶಾಸಕರಿಗೆ ಕೂಡ ಕೆಲ ಸ್ಥಾನಗಳನ್ನು ನೀಡುವ ಮೂಲಕ ಸರಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಲಿದ್ದಾರೆ ಎಂದು ವಿಶ್ಲೇಷಿಸ ಲಾಗುತ್ತಿದೆ.

ಸೋಮವಾರ ತಡ ರಾತ್ರಿಯ ಬೆಳವಣಿಗೆಯಲ್ಲಿ ಒಟ್ಟು 16 ಸಚಿವರು ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ರಾಜೀನಾಮೆ ನೀಡಿದ್ದಾರೆ. ಭೋಪಾಲ್‌ನಲ್ಲಿ ಮಾತನಾಡಿದ ಸಿಎಂ ಕಮಲ್‌ನಾಥ್‌, ಮಧ್ಯಪ್ರದೇಶದ ಜನರ ಪ್ರೀತಿಯೇ ನನ್ನ ಶಕ್ತಿ. ಹಾಲಿ ಸರಕಾರ ಜನರ ಆದೇಶದಿಂದ ರಚಿತವಾಗಿದೆ. ಮಾಫಿಯಾಗಳ ಮೂಲಕ ಅಸ್ಥಿರತೆ ಉಂಟು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ನಡುವೆ ಹೊಸದಿಲ್ಲಿಯಲ್ಲಿ ಕೂಡ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಮಧ್ಯಪ್ರದೇಶ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕರ ಸಭೆ ನಡೆಸಿದರು. ಇದರ ಜತೆಗೆ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಕೂಡ ಸರಣಿ ಸಭೆಗಳು ನಡೆದಿವೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಆಗಮಿಸಿ ಸಮಾಲೋಚನೆ ನಡೆಸಿದ್ದಾರೆ.

ಬೆಂಗಳೂರಿಗೆ ಕಾಂಗ್ರೆಸ್‌ನ 18 ಶಾಸಕರು
ಸೋಮವಾರ, ಮಧ್ಯಪ್ರದೇಶ ಕಾಂಗ್ರೆಸ್‌ನ 18 ಶಾಸಕರು, ವಿಶೇಷ ವಿಮಾನದಲ್ಲಿ ಏಕಾಏಕಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರಲ್ಲಿ ಐವರು, ಕಮಲ್‌ ಸಂಪುಟದಲ್ಲಿ ಸಚಿವರೆಂದು ಹೇಳಲಾಗಿದೆ. ಈ ಎಲ್ಲ ನಾಯಕರು, ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರ ಆಪ್ತರೆಂದು ಹೇಳಲಾಗಿದೆ.

Advertisement

ಈ ಮೊದಲು ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಕಮಲ್‌ನಾಥ್‌, ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದರು. ದಿಲ್ಲಿಯಲ್ಲಿ ಮಾತುಕತೆ ಮುಗಿದ 2-3 ಗಂಟೆಯಲ್ಲೇ ಭೋಪಾಲದಲ್ಲಿದ್ದ ಕಾಂಗ್ರೆಸ್‌ನ 18 ಶಾಸಕರ ತಂಡ ಏಕಾಏಕಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದರು.

ಆಪರೇಷನ್‌ ವದಂತಿ ಸುಳ್ಳು: ಮಧ್ಯಪ್ರದೇಶ ಬಿಜೆಪಿ
ಮಧ್ಯಪ್ರದೇಶ ಸರಕಾರದಲ್ಲಿ ಭಿನ್ನಮತ ಭುಗಿಲೆದ್ದಿರುವುದು ಹಾಗೂ ಕಾಂಗ್ರೆಸ್‌ ಪಕ್ಷದ ಶಾಸಕರು, ತಂಡೋಪತಂಡವಾಗಿ ಆ ರಾಜ್ಯದಿಂದ ಪಲಾಯನ ಮಾಡುತ್ತಿರುವುದರಿಂದ ತನ್ನ ಕೈವಾಡವಿಲ್ಲ ಎಂದು ಮಧ್ಯಪ್ರದೇಶ ಬಿಜೆಪಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next