ನವದೆಹಲಿ: ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಸೋಮವಾರವೂ ಮುಂದುವರಿದಿದೆ.
ಮಹಾರಾಷ್ಟ್ರದಲ್ಲಿ ಭಾನುವಾರದಿಂದ ಸೋಮವಾರದವರೆಗಿನ 24 ಗಂಟೆಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾಗಿ ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ಮೂರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ. ಉಳಿದಂತೆ ತೆಲಂಗಾಣ, ದೆಹಲಿ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಮಳೆ ಜೋರಾಗಿದ್ದು, ಅನೇಕ ಸ್ಥಳಗಳಲ್ಲಿ ಅನಾಹುತಗಳು ಸಂಭವಿಸಿವೆ.
ಅಮರನಾಥ ಯಾತ್ರೆ ಪುನಾರಂಭ:
ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಅಮರನಾಥ ಬಳಿ ಭಾರೀ ಮಳೆಯಿಂದಾಗಿ ಉಂಟಾದ ಅನಾಹುತದ ಹಿನ್ನೆಲೆ ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದ ಅಮರನಾಥ ಯಾತ್ರೆ ಸೋಮವಾರ ಭಾಗಶಃ ಪುನಾರಂಭಗೊಂಡಿದೆ.
ಯೋಧರು ನಿರ್ಮಿಸಿದ ಪರ್ಯಾಯ ಮಾರ್ಗದಲ್ಲಿ ಯಾತ್ರೆ ನಡೆಸಲಾಗುತ್ತಿದೆ. ಪಹಲ್ಗಂ ಬೇಸ್ ಕ್ಯಾಂಪ್‌ನಲ್ಲಿದ್ದ ಯಾತ್ರಿಗಳು ಸೋಮವಾರ ಚಂದನ್‌ವಾರಿ ಕಡೆ ಪ್ರಯಾಣ ಆರಂಭಿಸಿದ್ದಾರೆ. ಯಾತ್ರಿ ನಿವಾಸ್ ಬೇಸ್ ಕ್ಯಾಂಪ್, ಬಲ್ತಾಲ್ ಬೇಸ್ ಕ್ಯಾಂಪ್‌ನಿಂದಲೂ ಪ್ರಯಾಣ ಪುನಾರಂಭಗೊಂಡಿದೆ.