ಕೊಪ್ಪಳ: ತಾಲೂಕಿನ ಮಾದಿನೂರು ಸಮೀಪದಲ್ಲಿ ಬುಧವಾರ ಶ್ರೀ ಮಧ್ವಾಚಾರ್ಯರ 12 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀ ಮಧ್ವ ಸರೋವರವೂ ಉದ್ಘಾಟನೆಗೊಂಡಿತು. ಮಧ್ವಾಚಾರ್ಯರು ಉಡುಪಿಯ ಪುಂಜಾರಗಿರಿ ಗ್ರಾಮದಲ್ಲಿ ಜನ್ಮತಾಳಿದ ನೆನಪಿಗಾಗಿ ಆ ಭಾಗದಲ್ಲಿ
ಶ್ರೀಮಧ್ವರ 32ಅಡಿ ಎತ್ತರದ ಬೃಹದಾಕಾರದ ಕೃಷ್ಣ ಶಿಲಾ ಮೂರ್ತಿಯನ್ನು ಈ ಹಿಂದೆಯೇ ಪ್ರತಿಷ್ಠಾಪಿಸಲಾಗಿದೆ. ಆದರೆ, ಕೊಪ್ಪಳ ಭಾಗದಲ್ಲಿ ಬುಧವಾರ 4 ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀಮಧ್ವರ 12 ಅಡಿ ಎತ್ತರದ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಗಮನ ಸೆಳೆಯುವಂತಾಗಿದೆ.
ಮಧ್ವಾಚಾರ್ಯರ ಜೀವಿತಾವಧಿಯಲ್ಲಿ ದೇಹಾಕಾರ ಯಾವ ಆಕಾರದಲ್ಲಿ ಇತ್ತೋ ಅದೇ ರೂಪ, ಚಿತ್ರಣದಡಿ ಕಪ್ಪು ಶಿಲೆಯಿಂದ 10 ಅಡಿ
ಮಧ್ವರ ಮೂರ್ತಿ ಕೆತ್ತಲಾಗಿದೆ. 2 ಅಡಿಯನ್ನು ಪಾದುಕೆಗೆ ಬಳಸಲಾಗಿದೆ. ದಕ್ಷಿಣ ಭಾರತದಲ್ಲಿಯೇ 2ನೇ ಅತಿ ದೊಡ್ಡ ಮಧ್ವಾಚಾರ್ಯರ ಮೂರ್ತಿ ಇದಾಗಿದೆ. ಈ ಕ್ಷೇತ್ರ ಮಧ್ವರ ತಪೋವನ ಎಂದೇ ಕರೆಯಲ್ಪಟ್ಟಿದೆ.
ಶ್ರೀ ವಿದ್ಯಾಧೀಶತೀರ್ಥ ಪಾದಂಗಳು ಹಾಗೂ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಮಂತ್ರೋಪದೇಶ ಪಠಣ ಮಾಡುತ್ತಲೇ ಮೂರ್ತಿ ಬುಧವಾರ ಪ್ರತಿಷ್ಠಾಪಿಸಲಾಯಿತು. ಯಲಬುರ್ಗಾ ತಾಲೂಕಿನ ಬಳೂಟಗಿಯ ಭಕ್ತರು ಅರ್ಪಿಸಿದ್ದ 200 ಲೀಟರ್ ದೇಶಿ ತಳಿಯ ಹಾಲಿನ ಅಭಿಷೇಕ ಮಾಡಲಾಯಿತು.
ಬೆಳಗ್ಗೆ ಶ್ರೀಗಳಿಗೆ 108 ಪೂರ್ಣಕುಂಭದ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು. ಶ್ರೀಮಧ್ವರ ಮೂರ್ತಿ ಪ್ರತಿಷ್ಠಾಪನೆ ವೇಳೆ ಹೋಮ ಹವನ ನೆರವೇರಿದವು. ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಶತಕಲಶ ಸಹಿತ ಬ್ರಹ್ಮ ಕುಂಬಾಭಿಷೇಕ ನೆರವೇರಿದವು. ಸಂಸ್ಥಾನ ಪೂಜೆ ಹಾಗೂ ಮಧ್ಯಾಹ್ನ ಶ್ರೀಗಳಿಂದ ಶ್ರೀರಾಮ ದೇವರ ಪೂಜೆ, ನಂತರ ತೀರ್ಥ ಪ್ರಸಾದ ಜರುಗಿತು.
ಭಕ್ತರ ದಂಡು: ಹುಬ್ಬಳ್ಳಿ, ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಎರಡೂರು ಸಾವಿರಕ್ಕೂ ಭಕ್ತರು ಪೂಜೆಹಾಗೂ ಹೋಮ ಹವನದಲ್ಲಿ ಪಾಲ್ಗೊಂಡಿದ್ದರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಸೇರಿದಂತೆ ಇತರೆ ಗಣ್ಯರು ಪಾಲ್ಗೊಂಡಿದ್ದರು. ಕೊಪ್ಪಳದ ರಾಘವೇಂದ್ರಮಠದ ರಘುಪ್ರೇಮಾಚಾರ್ಯ, ಜಗನ್ನಾಥ ಆಚಾರ್ಯ, ವಸಂತರಾವ್ ತಿಕೋಟಿಕರ್ ಸೇರಿದಂತೆ ಇತರರು ಶ್ರೀಮಧ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಧ್ವ
ತಪೋವನ ಲೋಕಾರ್ಪಣೆಯ ನೇತೃತ್ವ ವಹಿಸಿದ್ದರು.
ಕೊಪ್ಪಳದ ರಾಘವೇಂದ್ರ ಮಠ, ಶ್ರೀಪೂರ್ಣ ಪ್ರಜ್ಞ ಪಾಠ ಶಾಲೆ, ಶ್ರೀಮಧ್ವ ತಪೋವನ ಸೇವಾ ಸಂಸ್ಥೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.