Advertisement

ಕಳಪೆ ಕಾಮಗಾರಿ ಸಹಿಸುವುದಿಲ್ಲ: ಮಾಧುಸ್ವಾಮಿ

11:04 AM Jan 26, 2019 | Team Udayavani |

ಹುಳಿಯಾರು: ಇತ್ತೀಚಿಗೆ ಸರ್ಕಾರದಿಂದ ಅನುದಾನ ತರುವುದು ಕಷ್ಟದ ಕೆಲಸ. ತಂದಿರುವ ಅನುದಾನದಲ್ಲಿ ಕಳಪೆ ಕಾಮಗಾರಿ ಮಾಡಿದರೆ ನಾನು ಸಹಿಸುವ ಶಾಸಕನಲ್ಲ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು. ಹುಳಿಯಾರು ಹೋಬಳಿಯ ಕೆಂಕೆರೆಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಸುವರ್ಣ ಗ್ರಾಮ ಯೋಜನೆಯಡಿ ಕೆಂಕೆರೆ ಗ್ರಾಪಂಗೆ 50 ಲಕ್ಷ ರೂ. ಹಾಗೂ ಎಸ್‌ಸಿ, ಎಸ್‌ಟಿ ಅನುದಾನದಲ್ಲಿ 35 ಲಕ್ಷ ರೂ.ಗಳನ್ನು ನೀಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ಈ ಹಣದ ಸದ್ಬಳಕೆ ಮಾಡಿ ಕೊಳ್ಳಿ ಎಂದು ಕಿವಿ ಮಾತು ಹೇಳಿದರಲ್ಲದೇ ಬರ ಶಿಡ್ಲಹಳ್ಳಿ ಹಾಗೂ ಕೆಂಕೆರೆ ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್‌ ಮಾತನಾಡಿ, ಶಾಸಕ ಮಾಧು ಸ್ವಾಮಿಯವರು ಕೆಂಕೆರೆ ಗ್ರಾಪಂಗೆ ಕೋಟ್ಯಂತರ ರೂ. ಹಣ ನೀಡಿದ್ದಾರೆ. ಅಲ್ಲದೇ ಕಾಮಗಾರಿ ಮಾಡಲು ತಕರಾರಿ ರುವ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಮನವೊಲಿಸಿ ಕಾಮಗಾರಿ ಮಾಡಿಸು ತ್ತಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷೆ ಆಶಾ ಉಮೇಶ್‌, ಉಪಾಧ್ಯಕ್ಷ ಜಯಣ್ಣ, ಸಿಡಿಪಿಒ ತಿಪ್ಪಯ್ಯ, ಮೇಲ್ವಿಚಾರಕಿ ಲಕ್ಷ್ಮೀ, ತಾಪಂ ಸದಸ್ಯ ಕೇಶವಮೂರ್ತಿ, ಮಾಜಿ ಸದಸ್ಯ ನಿರಂಜನ್‌, ಸೀತರಾಮು, ಗ್ರಾಪಂ ಸದಸ್ಯ ರಾದ ಕಾಡಿನರಾಜ ನಾಗರಾಜು, ಪಪಂ ಸದಸ್ಯ ಹೇಮಂತ್‌ ಮತ್ತಿತರರಿದ್ದರು.

ಶಂಕುಸ್ಥಾಪನೆ ದಿನವೇ ತಕರಾರು

ಹುಳಿಯಾರು ಹೋಬಳಿಯ ಕೆಂಕೆರೆಯಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡಕ್ಕೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದ ನಂತರ ಅಲ್ಲಿನ ಗ್ರಾಪಂ ಸದಸ್ಯ ಕಾಡಿನರಾಜ ನಾಗರಾಜು ಅವರಿಂದ ತಕರಾರು ಎದುರಿಸಬೇಕಾಯಿತು. ಶಂಕುಸ್ಥಾಪನೆ ನೆರವೇರಿಸಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೊರಡುವ ವೇಳೆ ನಾಗಣ್ಣ ಅವರು ಶಾಸಕರ ಬಳಿ ಬಂದು ಕಾಮಗಾರಿ ಕಂಟ್ರ್ಯಾಕ್ಟ್ ಯಾರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಭಟ್ಟರಹಳ್ಳಿ ದಿನೇಶ್‌ ಅನ್ನುವವರಿಗೆ ಕೊಟ್ಟಿರುವುದಾಗಿ ಶಾಸಕರು ಹೇಳಿದಾಗ ನಮ್ಮೂರಲ್ಲೇ ಅನೇಕರು ಕೆಲಸ ಮಾಡುವವರಿದ್ದರೂ ಬೇರೆಯವರಿಗೆ ಕೊಟ್ಟಿದ್ದೀರಿ. ನಾನು ಬೇರೆಯವರು ಕಾಮಗಾರಿ ಮಾಡಲು ಬಿಡಲ್ಲ ಎಂದರು. ಇದೇ ವೇಳೆ ಗ್ರಾಮಸ್ಥ ಮಚ್ಚು ಬಸವರಾಜು ಊರಿನವರು ಕೆಲಸ ಮಾಡಿದರೆ ನಾನು ಬಿಡೋದಿಲ್ಲ. ಬೇರೆಯೂರಿನವರು ಬಂದು ಮಾಡಿದರೆ ಗುಣಮಟ್ಟ ಕೇಳಬಹುದು. ಊರಿನವರು ಮಾಡಿದರೆ ಎಲ್ಲದಕ್ಕೂ ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ನಾಗಣ್ಣ ಅನೇಕ ಕಾಮಗಾರಿ ನಾನೂ ಮಾಡಿದ್ದು ಕಳಪೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. 2 ತಿಂಗಳಿಂದ ಊರಿನವರಾರಾದರೂ ಮಾಡುತ್ತಾರೆ ಕೇಳಿ ಎಂದು ಅಧಿಕಾರಿಗಳಿಗೆ ಮತ್ತು ಸ್ಥಳೀಯ ಮುಖಂಡರಿಗೆ ತಿಳಿಸಿದ್ದೆ. ಯಾರೊಬ್ಬರೂ ಮುಂದೆ ಬಾರದಿದ್ದರಿಂದ ಅನಿವಾರ್ಯವಾಗಿ ನಾನೇ ದಿನೇಶ್‌ಗೆ ಹೇಳಿದ್ದೇನೆ ಎಂದು ಶಾಸಕರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next