ಆಯುರ್ವೇದ ಮತ್ತು ಅಲೋಪಥಿ ವೈದ್ಯಪದ್ಧತಿಯ ನಡುವೆ ನಡೆಯುವ ಘರ್ಷಣೆ ನಿನ್ನೆ ಮೊನ್ನೆಯದ್ದಲ್ಲ. ಅದು ಸದ್ದಿಲ್ಲದೇ ನಡೆಯುತ್ತಲೇ ಬಂದಿದೆ. ಈಗ ಇದೇ ವಿಷಯವನ್ನು ಮೂಲವಾಗಿಟ್ಟುಕೊಂಡು ಬಂದಿರುವ ಚಿತ್ರ “ಮಧುರ ಕಾವ್ಯ’.
ನಾಟಿ ವೈದ್ಯ ಪದ್ಧತಿಯನ್ನು ಅಲೋಪಥಿಯವರು ಹೇಗೆ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಹೇಗೆ ತುಳಿಯುತ್ತಿದ್ದಾರೆ ಎಂಬುದನ್ನು ತೋರಿಸುವುದು ಈ ಚಿತ್ರದ ಮೂಲ ಉದ್ದೇಶ.
ನಿರ್ದೇಶಕ ಮಧುಸೂಧನ್ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಅವರ ಮೂಲ ಉದ್ದೇಶ ಆಯುರ್ವೇದವನ್ನು ಜನರಿಗೆ ತಲುಪಿಸುವುದು. ಅದನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಾಗಾಗಿ, ಕಮರ್ಷಿಯಲ್ ಸಿನಿಮಾಗಳ ಚೌಕಟ್ಟಿನಿಂದ ದೂರ ಉಳಿದು ಕಥೆಗೆ ಹೆಚ್ಚು ಮಹತ್ವ ನೀಡಲಾಗಿದೆ. ರಾಜಕಾರಣಿಗಳು ನಾಟಿ ವೈದ್ಯ ಪದ್ಧತಿಯನ್ನು ಹೇಗೆ ತುಳಿಯುತ್ತಾರೆ, ಅದಕ್ಕೆ ಅವರು ಅನುಸರಿಸುವ ಮಾರ್ಗಗಳೇನು ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದ ಮೂಲ ಆಶಯ ಚೆನ್ನಾಗಿದೆ. ನಿರೂಪಣೆ ಹಾಗೂ ಒಂದಷ್ಟು ದೃಶ್ಯಗಳನ್ನು ವಿಸ್ತೃತವಾಗಿ ತೋರಿಸಿದ್ದರೆ ಸಿನಿಮಾ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತಿತ್ತು.
ಚಿತ್ರದಲ್ಲಿ ಆಯುರ್ವೇದದ ಜೊತೆಗೆ ತಾಯಿ ಸೆಂಟಿಮೆಂಟ್ ಕೂಡಾ ಇದ್ದು, ಅದಕ್ಕೂ ಮಹತ್ವ ನೀಡಲಾಗಿದೆ. ಇಡೀ ಚಿತ್ರವನ್ನು ನೈಜ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದ್ದು, ಕಥೆಗೆ ಪೂರಕವಾಗಿವೆ.
ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಮಧುಸೂಧನ್ ಸಿನಿಮಾದುದ್ದಕ್ಕೂ ನೈಜವಾಗಿ ಕಾಣಿಸಿಕೊಂಡಿದ್ದಾರೆ. ನಾಟಿ ಔಷಧಿ ಮೂಲಕ ಜನರನ್ನು ಬದುಕಿಸುವ ಪಾತ್ರವನ್ನು ಮಧುಸೂಧನ್ ಮಾಡಿದ್ದಾರೆ. ರಾಜಕುಮಾರ ನಾವಿಕ, ಅಣ್ಣಪ್ಪ ಸ್ವಾಮಿ, ಜಗನ್ನಾಥ್ ಶೆಟ್ಟಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.