Advertisement

ಮಧುಕರ್‌ ಶೆಟ್ಟಿ ಆರ್ಮಿಯೇ ಇದೆ

06:44 AM Jan 21, 2019 | Team Udayavani |

ಬೆಂಗಳೂರು: ಸೇವೆ ಸೇರಿ ವಿವಿಧ ಹಂತಗಳಲ್ಲಿ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಧುಕರ್‌ ಶೆಟ್ಟಿ ಅವರ ದೊಡ್ಡ “ಆರ್ಮಿ’ಯೇ ಇಂದು ಪೊಲೀಸ್‌ ಇಲಾಖೆಯಲ್ಲಿದೆ. ವ್ಯವಸ್ಥೆ ಬದಲಾವಣೆಗೆ ಮುಂದೊಂದು ದಿನ ಅದು ಫ‌ಲ ನೀಡಲಿದೆ ಎಂದು ಐಜಿಪಿ ಅರುಣ್‌ ಚಕ್ರವರ್ತಿ ಹೇಳಿದ್ದಾರೆ.

Advertisement

ಮಧುಕರ್‌ ಶೆಟ್ಟಿ ಗೆಳೆಯರ ಬಳಗದಿಂದ ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜಿನ  ಎಚ್‌.ಎನ್‌.ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ದಿ. ಮಧುಕರ್‌ ಶೆಟ್ಟಿಯವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧುಕರ್‌ ಶೆಟ್ಟಿ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಹಳೆಯ ವಿದ್ಯಾರ್ಥಿ. ಹಾಗಾಗಿ ಅವರ ಸಹಪಾಠಿಗಳು ಹಾಗೂ ಸ್ನೇಹಿತರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮಧುಕರ್‌ ಶೆಟ್ಟಿ 1999ರಲ್ಲಿ ಪೊಲೀಸ್‌ ಸೇವೆಗೆ ಸೇರಿಕೊಂಡು 2018ರ ಕೊನೆ ತನಕ ಸೇವೆಯಲ್ಲಿದ್ದರು. ಈ ಅವಧಿಯಲ್ಲಿ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸಿದ್ದು, ನೂರಾರು ಅಧೀನ ಸಿಬ್ಬಂದಿ ಅವರ ಜತೆಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸ್‌ ಅಕಾಡೆಮಿ ಹಾಗೂ ಇಂಡಿಯನ್‌ ಪೊಲೀಸ್‌ ಅಕಾಡೆಮಿಯಲ್ಲಿ ಸಾವಿರಾರು ಮಂದಿಗೆ ತರಬೇತಿ ಕೊಟ್ಟಿದ್ದಾರೆ.

ಅವರ ತರಬೇತಿಯಿಂದ ಪ್ರಭಾವಿತರಾದವರು ಹಾಗೂ ಮಧುಕರ್‌ ಶೆಟ್ಟಿ ನಿರ್ದಿಷ್ಟವಾಗಿ ಗುರುತಿಸಿ ತರಬೇತಿ ಮತ್ತು ಪ್ರೋತ್ಸಾಹ ನೀಡಿದವರ ಸಂಖ್ಯೆ ಸಾವಿರಾರು. ಒಂದು ಅರ್ಥದಲ್ಲಿ ಅದು ಮಧುಕರ್‌ ಶೆಟ್ಟಿಯವರ ಆರ್ಮಿ ಇದ್ದಂತೆ. ಈ ಆರ್ಮಿ ಇಲಾಖೆಯಲ್ಲಿ ಮೌನವಾಗಿ ಕೆಲಸ ಮಾಡುತ್ತಿದೆ. ಈ ಮೌನ ಮುಂದೊಂದು ದಿನ ವ್ಯವಸ್ಥೆ ಬದಲಿಸುವ ಮಧುಕರ್‌ ಶೆಟ್ಟಿ ಅವರ ಆಶಯಕ್ಕೆ ಫ‌ಲ ನೀಡಲಿದೆ ಎಂದರು.

ಮಧು ನನ್ನ ಗುರು: ಗುರು ಶಿಷ್ಯರ ಸಂಬಂಧ ಕಾಲಾಂತರದಲ್ಲಿ ಸ್ನೇಹವಾಗುತ್ತದೆ. ಅದೇ ರೀತಿ ಸ್ನೇಹ ಸಂಬಂಧ ಒಂದು ಹಂತದಲ್ಲಿ ಮತ್ತೆ ಗುರು ಶಿಷ್ಯರ ಸಂಬಂಧವಾಗಿ ಪರಿವರ್ತನೆಯಾಗುತ್ತದೆ. ನಾನು ಮತ್ತು ಮಧುಕರ್‌ ಶೆಟ್ಟಿ ಗೆಳೆಯರಾಗಿದ್ದೆವು. ಕ್ರಮೇಣ ನಮ್ಮಿಬ್ಬರ ಸ್ನೇಹ ಸಂಬಂಧ ಗುರು-ಶಿಷ್ಯರ ಸಂಬಂಧವಾಗಿ ರೂಪಗೊಂಡಿತು. ನಿಜಕ್ಕೂ ನಾನು ಮಧುಕರ್‌ ಶೆಟ್ಟಿಯಿಂದ ಸಾಕಷ್ಟು ಕಲಿತಿದ್ದೇನೆ. ಒಂದು ಅರ್ಥದಲ್ಲಿ “ಮಧು ನನ್ನ ಗುರು’ ಎಂದು ಹೇಳಿದ ಚಕ್ರವರ್ತಿ, ಮಧುಕರ್‌ ಶೆಟ್ಟಿ ಅವರೊಂದಿಗಿನ ವೃತ್ತಿ ಬಾಂಧವ್ಯವನ್ನು ಮೆಲಕು ಹಾಕಿದರು. 

Advertisement

ಕಾರ್ಯಕ್ರಮದಲ್ಲಿ ಮಧುಕರ್‌ ಶೆಟ್ಟಿಯವರ ಗುರುಗಳಾದ ಪ್ರೊ.ಶಶಿಧರ್‌, ಡಾ. ಪದ್ಮಿನಿರಾವ್‌, ಡಾ. ಸುಬ್ಬರಾವ್‌, ಪ್ರೊ.ಎಚ್‌.ಕೆ. ಮೌಳೇಶ್‌, ಪ್ರೊ.ಜಿ.ರಾಮಕೃಷ್ಣ, ಸಹಪಾಠಿಗಳಾದ ನರಹರಿ, ಎಸ್‌.ಪಿ.ರಮೇಶ್‌, ಡಾ.ಬಾಬು ಯೋಗೇಶ್‌, ತಾರಕೇಶ್‌, ಪ್ರೊ.ರಾಜೇಶ್‌, ಹಾಸ್ಟೆಲ್‌ ವಾರ್ಡನ್‌ ನಾಗರಾಜ್‌, ಸಂಬಂಧಿ ವಡ್ಡರ್ಸೆ ಮೋಹನ್‌ರಾಮ್‌ ಶೆಟ್ಟಿ ಮತ್ತಿತರರು ಹಾಜರಿದ್ದರು.

ಮಧುನನ್ನು ಉಳಿಸಿಕೊಳ್ಳಲು ಸರ್ಕಾರದ ಬಳಿ ಹಣ ಇರಲಿಲ್ಲವಾ?: ಮಧುಕರ್‌ ಶೆಟ್ಟಿಯವರ ಸಂಬಂಧಿ ಪ್ರವೀಣ್‌ ಶೆಟ್ಟಿ ಮಾತನಾಡಿ, “ಮಧುಗೆ ನಿಜವಾಗಿ ಏನು ತೊಂದರೆ ಅಥವಾ ಕಾಯಿಲೆ ಇತ್ತು ಅನ್ನುವುದರ ಬಗ್ಗೆ ಸರಿಯಾಗಿ ಪರೀಕ್ಷೆ ಆಗಿಲ್ಲ. ಹೈದಾರಾಬಾದ್‌ ಆಸ್ಪತ್ರೆಯಲ್ಲಿ ಮಧು ಐಸಿಯುನಲ್ಲಿ ಇದ್ದಾಗ, ನಾವೆಲ್ಲ ಸೋದರ ಸಂಬಂಧಿಗಳು ಹೊರಗಡೆ ಇದ್ದೇವು. ಯಾರೊಬ್ಬರೂ ಒಳಗೆ ಏನು ನಡಿತಿದೆ ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿರಲಿಲ್ಲ.

ಆವರಿಗೆ ಎಚ್‌1ಎನ್‌1 ಇತ್ತು. ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ನಾನು ಮಾಧ್ಯಮಗಳಲ್ಲೇ ನೋಡಿದ್ದು. ಆದರೆ, ವೈದ್ಯರಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಒಬ್ಬ ರಾಜಕಾರಣಿಗೆ ಶೀತ ಆದರೆ ಸಿಂಗಾಪುರಕ್ಕೆ ಕಳಿಸುತ್ತಾರೆ. ಇಂತಹ ಒಬ್ಬ ಅಧಿಕಾರಿಗೆ ಅದು ಯಾಕೆ ಅನ್ವಯವಾಗಿಲ್ಲ. ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕೇಳಿದಾಗ ಈ ಆಸ್ಪತ್ರೆ ಜತೆಗೆ ಇಲಾಖೆಯ “ಟೈಅಪ್‌’ ಇದೆ ಎಂದು ಅಧಿಕಾರಿಗಳು ಹೇಳಿದರು. ಹಾಗಾದರೆ, ಸರ್ಕಾರದ ಬಳಿ ಹಣ ಇರಲಿಲ್ವಾ ಎಂದು ಅಕ್ರೋಶದಿಂದ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next