Advertisement

ಹುಟ್ಟೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ  ಮಧುಕರ್‌ ಶೆಟ್ಟಿ

05:36 AM Dec 29, 2018 | Team Udayavani |

ಕೋಟ: ಎಚ್‌1ಎನ್‌1 ಬಾಧಿತರಾಗಿ ಶುಕ್ರವಾರ ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಐಪಿಎಸ್‌ ಅಧಿಕಾರಿ ಡಾ| ಮಧುಕರ್‌ ಶೆಟ್ಟಿ ಅವರು ಊರಿನ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಗುಡ್ಡೆಟ್ಟು ಸಮೀಪದ ಯಡಾಡಿ ಮತ್ಯಾಡಿಯಲ್ಲಿ ಮಧುಕರ ಶೆಟ್ಟಿ ಅವರ ತಾಯಿ ಮನೆಯಿದ್ದು, ಊರಿಗೆ ಬಂದಾಗ ಈ ಮನೆಗೆ ಭೇಟಿ ನೀಡುತ್ತಿದ್ದರು. ಇಲ್ಲಿಯೇ ತಂದೆ ಮತ್ತು ತಾಯಿಯ ಸಮಾಧಿ ಸ್ಥಳವಿದೆ. ಹಾಗೂ ತಾಯಿಯ ಹೆಸರಿನ ಪ್ರಫ‌ುಲ್ಲಾ ಫಾರ್ಮ್ ಇದೆ. ಸದ್ಯ ಈ ಮನೆಯನ್ನು ಕೆಲಸದವರು ನೋಡಿಕೊಳ್ಳುತ್ತಿದ್ದಾರೆ.

Advertisement

ಮಧುಕರ ಶೆಟ್ಟಿ ಅವರ ತಂದೆ ಮನೆಯಾದ ವಡ್ಡರ್ಸೆಗ2ೆ ಧಾರ್ಮಿಕ ಹಾಗೂ ವಿಶೇಷ ಸಂದರ್ಭ ಗಳಲ್ಲಿ ಅವರು ಭೇಟಿ ನೀಡುತ್ತಿದ್ದರು. ಊರಿನ ಜತೆ ಅವರಿಗೆ ಭಾವನಾತ್ಮಕವಾದ ಸಂಬಂಧವಿತ್ತು.  ಶುಕ್ರವಾರ ಬೆಳಗ್ಗೆ ಅಭಿಮಾನಿಗಳು ಅವರು ಆರೋಗ್ಯವಾಗುವಂತೆ ವಡ್ಡರ್ಸೆಯ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ಅವರೀಗ ಅಗಲಿರುವುದು ಇಲ್ಲಿನ ಜನರಿಗೆ ಆಘಾತ, ನೋವನ್ನು ತಂದಿದೆ.

ಎರಡು ವರ್ಷಗಳ ಹಿಂದೆ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಅವರಿಗೆ ಸಂಬಂಧಿಸಿದ ಹಸ್ತಪ್ರತಿ ಹಾಗೂ ಅಮೂಲ್ಯ ವಸ್ತುಗಳನ್ನು ಕೊಂಡೊಯ್ದಿದ್ದರು. ವಡ್ಡರ್ಸೆ ಅವರ ಹೆಸರು ಮತ್ತು ಬರವಣಿಗೆಯನ್ನು ಶಾಶ್ವತವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದ್ದರು. 

ಖಡಕ್‌ ಅಧಿಕಾರಿ
ದಕ್ಷತೆ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಶೆಟ್ಟಿ ಅವರು ಚಿಕ್ಕ ಮಗಳೂರು, ಚಾಮರಾಜನಗರ ಮತ್ತಿತರ ಕಡೆ ಪೊಲೀಸ್‌ ಅಧೀಕ್ಷಕರಾಗಿ, ಬೆಂಗಳೂರು ಸಂಚಾರ ಡಿಸಿಪಿಯಾಗಿ ಕಾರ್ಯನಿರ್ವ ಹಿಸಿದ್ದರು. ಲೋಕಾಯುಕ್ತದಲ್ಲಿ ಎಸ್‌ಪಿಯಾಗಿ, ಅಕ್ರಮ ಗಣಿಗಾರಿಕೆ ಮತ್ತು ಡಿನೋಟಿಫಿಕೇಶನ್‌ ಪ್ರಕರಣಗಳಲ್ಲಿ ತನಿಖೆ ನಡೆಸಿ ಖಡಕ್‌ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ಶೆಟ್ಟಿ ಅವರು 1971 ಡಿ.17ರಂದು ಜನಿಸಿದ್ದರು. ದಿಲ್ಲಿಯ ಜೆಎನ್‌ಯು ವಿವಿಯಲ್ಲಿ  ಸಮಾಜಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದರು. 1999ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಅವರು ಚಿಕ್ಕಮಗಳೂರು, ಚಾಮರಾಜನಗರ, ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಉನ್ನತ ವಿದ್ಯಾಭ್ಯಾಸ ರಜೆಯ ಮೇಲೆ ಅಮೆರಿಕಾಗೆ ತೆರಳಿ ಡಾಕ್ಟರೇಟ್‌ ಪದವಿ ಪಡೆದಿದ್ದರು. ವಿದೇಶದಿಂದ ವಾಪಾಸ್‌ ಬಂದ ಬಳಿಕ ಡಿಐಜಿಯಾಗಿ ಭಡ್ತಿ ಪಡೆದು ಕೆಲವು ಕಾಲ ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next