Advertisement

ಮಧುಕರ್‌ ಶೆಟ್ಟಿ ಸಾವು ನಿಗೂಢ?

12:30 AM Dec 30, 2018 | Team Udayavani |

ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿ ಡಾ. ಮಧುಕರ್‌ ಶೆಟ್ಟಿ ಸಾವು ಅಸ್ವಾಭಾವಿಕವೇ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಆವರಿಗೆ ಎಚ್‌1ಎನ್‌1 ಸೋಂಕು ತಗುಲಿದೆ ಹಾಗೂ ಹೃದಯ ಸಮಸ್ಯೆ ಮತ್ತು ಶ್ವಾಸಕೋಶಕ್ಕೆ ಸೋಂಕು ತಗುಲಿ ಸಾವಿಗೀಡಾದರು ಎಂಬ ಅದಲು ಬದಲು ಹೇಳಿಕೆಗಳು ಈ ಶಂಕೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಗೃಹಸಚಿವರು, ಸಚಿವರು, ಸಂಸದರು ಮತ್ತು ಅಧಿಕಾರಿ ವರ್ಗ ತನಿಖೆ ಸೂಕ್ತ ಎಂದಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

Advertisement

ಸಾವಿಗೆ ಅಚ್ಚರಿ ವ್ಯಕ್ತಪಡಿಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಾವಿನ ಹಿನ್ನೆಲೆ ಬಗ್ಗೆ ತನಿಖೆ ಆಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಹೇಳಿಕೆ ಬಳಿಕ ಸಾವಿನ ನಿಗೂಢತೆ ಬಗ್ಗೆ ಹಲವು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿವೆ. ಗೃಹ ಸಚಿವ ಎಂ.ಬಿ ಪಾಟೀಲ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಮಧುಕರ್‌ ಶೆಟ್ಟಿ ಸಾವಿನ ಕುರಿತ ವರದಿಗಳನ್ನು ಪರಿಶೀಲಿಸಿ ಅಗತ್ಯಬಿದ್ದರೆ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರೂ ಮಧುಕರ್‌ ಶೆಟ್ಟಿ ಸಾವಿನ ಕುರಿತು ಸೂಕ್ತ ತನಿಖೆ ಆಗಬೇಕಿದೆ ಎಂದು ಹೇಳಿದ್ದಾರೆ.

ಯಲಹಂಕದ ಸಶಸ್ತ್ರ ಮೀಸಲು ಪಡೆ ತರಬೇತಿ ಶಾಲಾ ಮೈದಾನದಲ್ಲಿ ಶನಿವಾರ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್‌, ಮಧುಕರ್‌ ಶೆಟ್ಟಿ ಸಾವಿಗೆ ಸಂಬಂಧಿಸಿದಂತೆ ಹೈದ್ರಾಬಾದ್‌ನ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿ ವರದಿ ಹಾಗೂ ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಪ್ರಾಥಮಿಕ ವರದಿ ಪಡೆದುಕೊಂಡು ಇಲಾಖೆ ಪರಿಶೀಲಿಸಿದ್ದು, ಪ್ರಾಥಮಿಕವಾಗಿ ಯಾವುದೇ ಅನುಮಾನ ವ್ಯಕ್ತವಾಗಿಲ್ಲ. ಪೂರ್ಣ ವರದಿ ತರಿಸಿಕೊಂಡು ಪರಿಶೀಲಿಸಿದ ಬಳಿಕ ಅಗತ್ಯ ಬಿದ್ದರೆ ಮುಂದಿನ ಕ್ರಮ ವಹಿಸಲಾಗುವುದು ಎಂದರು. 

ಈ ನಡುವೆ ಹೆಸರು ಹೇಳಲಿಚ್ಛಿಸದ ಐಪಿಎಸ್‌ ಅಧಿಕಾರಿಯೊಬ್ಬರು ಮಧುಕರ್‌ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟ ರಾಜಕಾರಣಿಗಳು, ಪೊಲೀಸರೂ ಸೇರಿದಂತೆ ಭ್ರಷ್ಟ ಅಧಿಕಾರಿಗಳ ಬಗ್ಗೆ ಬಹಳಷ್ಟು ಆಘಾತಕಾರಿ ಮಾಹಿತಿಗಳು ಮಧುಕರ್‌ ಬಳಿ ಇವೆ. ಅಂತಹ ದಾಖಲೆಗಳ ಕಾರಣ ಈ ಸಾವಿನ ಹಿಂದೆ ಇದೆಯೆ? ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದಾಗ ಇದ್ದ ಸ್ಥಿತಿ, ಕೈಗೊಂಡ ವೈದ್ಯಕೀಯ ಚಿಕಿತ್ಸೆಗಳು, ಅವರು ಕುಸಿದುಬಿದ್ದಾಗ ಅಲ್ಲಿದ್ದವರು ಮತ್ತು ಇತರ ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಧುಕರ್‌ ಆರೋಗ್ಯ ಪರಿಸ್ಥಿತಿ ಮತ್ತು ಸಾವಿನ ಕುರಿತು ವರದಿಗಳನ್ನು ಪರಿಶೀಲಿಸಿ ಅವಶ್ಯ ಬಿದ್ದಲ್ಲಿ ಮುಂದಿನ ಕ್ರಮ ವಹಿಸಲಾಗುವುದು.
– ಎಂ.ಬಿ ಪಾಟೀಲ್‌, ಗೃಹ ಸಚಿವ

Advertisement

ಮಧುಕರ್‌ ಶೆಟ್ಟಿ ಅವರ ಸಾವಿನ ಸುದ್ದಿ ಕೇಳಿ ಅಚ್ಚರಿಯಾಯಿತು. ಅದರ ಹಿನ್ನೆಲೆ ಏನು ಎನ್ನುವದರ ಬಗ್ಗೆ ತನಿಖೆ ಮಾಡಬೇಕಿದೆ. ಸ್ವಾಭಾವಿಕವಾಗಿದೆಯೇ? ಏನಾದರೂ ಹೆಚ್ಚು ಕಡಿಮೆ ಆಗಿದೆಯೆ? ಆ ಬಗ್ಗೆ ತಿಳಿದುಕೊಳ್ಳಬೇಕು. ಬಹಳ ಗೌರವಾನ್ವಿತ ವ್ಯಕ್ತಿ. ಪೊಲೀಸ್‌ ಇಲಾಖೆಯ ಆಸ್ತಿಯಾಗಿದ್ದರು. 
– ಡಿ.ಕೆ. ಶಿವಕುಮಾರ್‌, ಸಚಿವ 

ಉಡುಪಿ ಜಿಲ್ಲೆಯ ಮಧುಕರ್‌ ಶೆಟ್ಟಿ ಅವರು ಶೃಂಗೇರಿಯಲ್ಲಿ ನಕ್ಸಲರ ವಿರುದ್ಧ ಉತ್ತಮ ಕೆಲಸಮಾಡಿದ್ದರು. ನಕ್ಸಲರನ್ನು ಪತ್ತೆಹಚ್ಚುವಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದರು. ಲೋಕಾಯುಕ್ತದಲ್ಲೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಭೃಷ್ಟರಿಗೆ ಸಿಂಹಸ್ವಪ್ನರಾಗಿದ್ದರು. ಅವರು ಶ್ವಾಸಕೋಶ ಸಮಸ್ಯೆ ಅಥವಾ ಎಚ್‌1ಎನ್‌1 ಸೋಂಕಿನಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕು.
– ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next