ಬೆಂಗಳೂರು: ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಯಡಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಯಲಿದೆ.
ಶನಿವಾರ ಬೆಳಗ್ಗೆ ಹೈದ್ರಾಬಾದ್‌ನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನಿಟ್ಟು ಅಂತಿಮ ನಮನ ಸಲ್ಲಿಸಿ ಸರ್ಕಾರಿ ಗೌರವಗಳೊಂದಿಗೆ ವಿಮಾನ ನಿಲ್ದಾಣದವರೆಗೆ ಆಂಬುಲೆನ್ಸ್ ಮೂಲಕ ಕರೆತಂದು ರಾಜ್ಯ ಪೊಲೀಸರಿಗೆ ಪಾರ್ಥಿವ ಶರೀರ ಹಸ್ತಾಂತರಿಸಲಾಯಿತು. ವಿಶೇಷ ವಿಮಾನ 1.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
ಅಲ್ಲಿಂದ ನೇರವಾಗಿ ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆ ಮೈದಾನಕ್ಕೆ ತಂದು ಸಂಜೆ 5:30ರವರೆಗೆ ಅಂತಿಮ ದರ್ಶನಕ್ಕೆ ಇಡಲಾಯಿತು. ಗೃಹ ಸಚಿವ ಎಂ.ಬಿ ಪಾಟೀಲ್, ಡಿಜಿಪಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು, ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಸಂಜೆ 5: 20ರ ಸುಮಾರಿಗೆ ಪೊಲೀಸರು ರಾಷ್ಟ್ರಗೀತೆ ಹಾಡಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.
ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಹುಟ್ಟೂರು ಕುಂದಾಪುರ ತಾಲೂಕಿನ ಗುಡ್ಡಟ್ಟಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತದ ವತಿಯಿಂದ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗಿದೆ.
ಶಿರಿಯಾರದಿಂದ ಗುಡ್ಡಟ್ಟು ರಸ್ತೆಯಲ್ಲಿ 5 ಕಿ.ಮೀ. ಮುಂದೆ ಸಾಗಿದರೆ ಯಡಾಡಿ ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ಮಧುಕರ ಶೆಟ್ಟಿಯವರ ಮನೆ ಇದೆ. ಇಲ್ಲಿನ ತೋಟದಲ್ಲಿ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ತಾಯಿ ಪ್ರಪುಲ್ಲಾ ರೈ ಅವರ ಸಮಾಧಿ ಇದ್ದು, ಇದರ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆ ಬಳಿಕ ಹಿಂದೂ ಬಂಟ ವಿಧಿ-ವಿಧಾನದಂತೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ.