Advertisement

ಯಾರಿಗೆ ಸಿಗಲಿದೆ ‘ಮಧು’ಬನಿ?

11:08 AM May 04, 2019 | Sriram |

ಬಿಹಾರದ ಮಧುಬನಿ ಲೋಕಸಭಾ ಕ್ಷೇತ್ರಕ್ಕೆ ಐದನೇ ಹಂತ (ಮೇ 6)ದಲ್ಲಿ ಮತದಾನ ನಡೆಯಲಿದೆ. ಹಿಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ನಾಯಕರು ಯಾರೂ ಈ ಬಾರಿಯ ಕಣದಲ್ಲಿ ಇಲ್ಲ. ಬಿಜೆಪಿ ವತಿಯಿಂದ ಅಶೋಕ್‌ ಕುಮಾರ್‌ ಯಾದವ್‌, ವಿಕಾಸ್‌ಶೀಲ್ ಇನ್‌ಸಾನ್‌ ಪಾರ್ಟಿಯಿಂದ ಬಿದ್ರಿ ಕುಮಾರ್‌ ಪುರ್ಬೆ ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಆರ್‌ಜೆಡಿಯಿಂದ ಅಬ್ದುಲ್ ಬರಿ ಸಿದ್ದಿಕಿ ದ್ವಿತೀಯ ಸ್ಥಾನಿಯಾಗಿದ್ದರು.

Advertisement

ಹಾಲಿ ಸಂಸದ ಹುಕುಂ ದೇವ್‌ ನಾರಾಯಣ ಯಾದವ್‌ಗೆ 79 ವರ್ಷ ವಯಸ್ಸು. ಹೀಗಾಗಿ ಟಿಕೆಟ್ ನೀಡಲಾಗಿಲ್ಲ. ಅವರ ಪುತ್ರ ಅಶೋಕ್‌ ಕುಮಾರ್‌ ಯಾದವ್‌ಗೆ ಟಿಕೆಟ್ ನೀಡಿದೆ. ಅಶೋಕ್‌ ಕುಮಾರ್‌ ಕಿಯೋಟಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿನ ಮತ್ತೂಂದು ಪ್ರಮುಖ ಮುಖವೆಂದರೆ ಕಾಂಗ್ರೆಸ್‌ ಮುಖಂಡ ಶಕೀಲ್ ಅಹ್ಮದ್‌ ತಮಗೆ ಟಿಕೆಟ್ ನೀಡದೇ ಇದ್ದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಚುನಾವಣೆಯಲ್ಲಿ ಸೋತರೂ ಗೆದ್ದರೂ ಕಾಂಗ್ರೆಸಿಗನಾಗಿಯೇ ಇರುತ್ತೇನೆ ಎಂದು ಶಕೀಲ್ ಅಹ್ಮದ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 1998ರ ಚುನಾವಣೆಯಲ್ಲಿ ಶಕೀಲ್ ಅಹ್ಮದ್‌ ಗೆದ್ದು ಲೋಕಸಭೆ ಪ್ರವೇಶ ಮಾಡಿದ್ದರು.

ಹೀಗಾಗಿ, ಹಾಲಿ ಚುನಾವಣೆಯಲ್ಲಿ ಕುತೂಹಲಕಾರಿ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ, ಪ್ರಧಾನಿ ಮೋದಿ ಪರ ಅಲೆ, ಹಿಂದೂ-ಮುಸ್ಲಿಂ ವಿಚಾರ, ರಾಷ್ಟ್ರವಾದದ ಆಧಾರದಲ್ಲಿ ಬಿಜೆಪಿ ಮೂರನೇ ಬಾರಿಗೆ ಕ್ಷೇತ್ರದಲ್ಲಿ ಜಯ ಗಳಿಸುವ ಬಗ್ಗೆ ಯೋಚನೆ ಮಾಡುತ್ತಿದೆ.

ಆರ್‌ಜೆಡಿ ವತಿಯಿಂದ ಮಾಜಿ ಸಚಿವ ಎಂ.ಎ.ಎ.ಫಾತ್ಮಿಗೆ ಕಣಕ್ಕೆ ಇಳಿವ ಮನಸ್ಸು ಇತ್ತು. ಆದರೆ ಪಕ್ಷದ ನಾಯಕರು ಅದಕ್ಕೆ ಅವಕಾಶ ಕೊಡಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶಕೀಲ್ ಅಹ್ಮದ್‌ಗೆ ಕಾಂಗ್ರೆಸ್‌ನ ಬೆಂಬಲ ಇಲ್ಲದೆ ಸ್ವಂತ ವರ್ಚಸ್ಸಿನಿಂದ ಗೆಲ್ಲುವ ವಿಶ್ವಾಸವಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿಕಾಸ್‌ಶೀಲ್ ಇನ್‌ಸಾನ್‌ ಪಾರ್ಟಿ (ವಿಐಪಿ) ಅಭ್ಯರ್ಥಿ ಬಿದ್ರಿ ಕುಮಾರ್‌ ಪುರ್ಬೆ ಪರವಾಗಿ ಪ್ರಚಾರ ನಡೆಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್‌ ಯಾದವ್‌ ಕೂಡ ಮಹಾಮೈತ್ರಿಕೂಟದ ಹುರಿಯಾಳು ಪರವಾಗಿ ಮತ ಯಾಚನೆ ಮಾಡಿದ್ದಾರೆ. ಪುರ್ಬೆ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಅಶೋಕ್‌ ಕುಮಾರ್‌ ಯಾದವ್‌ರನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಶಕೀಲ್ ಅಹ್ಮದ್‌.

ರಸ್ತೆ ನಿರ್ಮಾಣ, ವಿದ್ಯುತ್‌ ಸಂಪರ್ಕ, ಶಿಕ್ಷಣ ಕ್ಷೇತ್ರದಲ್ಲಿ ಮಧುಬನಿಯಲ್ಲಿ ಕೆಲಸಗಳು ಆಗಿವೆ. ಆದರೆ ಸ್ಥಳೀಯ ನಾಯಕರು ಹಿಂದೂ-ಮುಸ್ಲಿಂ ವಿಚಾರವನ್ನೇ ಪ್ರಧಾನವಾಗಿರಿಸಿಕೊಂಡು ಮಾತನಾಡುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರೆ ಅಂಥ ವಿಚಾರಗಳ ಪ್ರಸ್ತಾಪ ಏಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಕೆಲ ಸ್ಥಳೀಯರದ್ದು. ಆರ್‌ಜೆಡಿಯಿಂದ ಫಾತ್ಮಿ ಅವರಿಗೆ ಟಿಕೆಟ್ ನೀಡದೇ ಇರುವುದು ಮತ್ತು ಶಕೀಲ್ ಅಹ್ಮದ್‌ ಕಣದಲ್ಲಿ ಇರುವುದು ಬಿಜೆಪಿ ಅಭ್ಯರ್ಥಿಗೆ ಧನಾತ್ಮಕವಾಗಿ ಪ್ರಭಾವ ಬೀರಲಿದೆ ಎನ್ನುವುದು ಕ್ಷೇತ್ರದಲ್ಲಿನ ಹಲವರ ಅಂಬೋಣ.

Advertisement

ಈ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಯಾದವ ಸಮುದಾಯದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮುಸ್ಲಿಂ ಸಮುದಾಯದ ಮುಖಂಡರ ಅಭಿಪ್ರಾಯದ ಪ್ರಕಾರ ಮಹಾಮೈತ್ರಿಕೂಟದ ಅಭ್ಯರ್ಥಿ ಬಿದ್ರಿ ಕುಮಾರ್‌ ಪುರ್ಬೆಗಿಂತ ಶಕೀಲ್ ಅಹ್ಮದ್‌ ಪ್ರಬಲ ನಾಯಕ. ಬಿಜೆಪಿಗೆ ಅವರೇ ಸರಿಯಾದ ಸ್ಪರ್ಧೆ ನೀಡಲಿದ್ದಾರೆ ಎನ್ನುತ್ತಾರೆ.

ಈ ಬಾರಿ ಕಣದಲ್ಲಿ
ಅಶೋಕ್‌ ಕುಮಾರ್‌ ಯಾದವ್‌ (ಬಿಜೆಪಿ)ಬಿದ್ರಿ ಕುಮಾರ್‌ ಪುರ್ಬೆ (ವಿಕಾಸ್‌ಶೀಲ್ ಇನ್ಸಾನ್‌ ಪಾರ್ಟಿ)

Advertisement

Udayavani is now on Telegram. Click here to join our channel and stay updated with the latest news.

Next