Advertisement

ಮಧು-ಯಾಸ್ಕಿನ್‌ ಹೇಳಿಕೆ ಅಪ್ರಬುದ್ಧತೆಗೆ ಸಾಕ್ಷಿ

02:35 PM Jul 25, 2017 | |

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕುರಿತು ಶಾಸಕ ಮಧುಬಂಗಾರಪ್ಪ ಹಾಗೂ ಎಐಸಿಸಿ
ಕಾರ್ಯದರ್ಶಿ ಮಧು ಯಾಸ್ಕಿನ್‌ ನೀಡಿರುವ ಹೇಳಿಕೆ ಅವರಲ್ಲಿನ ಅಪ್ರಬುದ್ಧತೆಗೆ ಸಾಕ್ಷಿ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿನ್‌ ಜಿಲ್ಲೆಗೆ ಭೇಟಿ ನೀಡಿದ
ಸಂದರ್ಭದಲ್ಲಿ ತಮ್ಮ ಚೇಲಾ ಹಾಗೂ ಸ್ಥಳೀಯ ಕಾಂಗ್ರೆಸ್‌ ನಾಯಕರು ಹೇಳಿದ ಮಾತನ್ನೇ ನಂಬಿಕೊಂಡು ಯಡಿಯೂರಪ್ಪ ಕುರಿತು ಹಗುರ ಶಬ್ದ ಬಳಕೆ ಮಾಡಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು. ಯಡಿಯೂರಪ್ಪರಿಂದ ಜಿಲ್ಲೆ ಅಪವಿತ್ರವಾಗಿದೆ ಎಂಬ ಯಾಸ್ಕಿನ್‌ ಹೇಳಿಕೆ ಅರ್ಥವಿಲ್ಲದ್ದು. ಏಕೆಂದರೆ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಂದ ಜಿಲ್ಲೆ ಅಪವಿತ್ರವಾಗಿದೆ. ಹಿಂದೆ
ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ಕ್ಲಾಸಿಕ್‌ ಕಂಪ್ಯೂಟರ್‌, ಆಶ್ರಯ ಸಮಿತಿ ಹಗರಣದ ಆರೋಪದಲ್ಲಿ ಸಿಲುಕಿದ್ದರು.

ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧವೂ ಆರೋಪ ಕೇಳಿಬಂದಿತ್ತು. ಹೋರಾಟಗಾರರ ಜಿಲ್ಲೆಯಲ್ಲಿ ಮಾತನಾಡುವಾಗ ಕನಿಷ್ಠ ಮಾಹಿತಿ ಹೊಂದಿರಬೇಕು. ಎಐಸಿಸಿ ಕಾರ್ಯದರ್ಶಿಯನ್ನು ಇಲ್ಲಿನ ಕಾಂಗ್ರೆಸ್‌ ನಾಯಕರು ದಾರಿ ತಪ್ಪಿಸಬಾರದು ಎಂದು ತಿರುಗೇಟು ನೀಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಮಾಪ್ತಿಯಾಗುತ್ತದೆ ಎಂದು ಯಾಸ್ಕಿನ್‌ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಯಾರು ಸಮಾಪ್ತಿಯಾಗುತ್ತಾರೆ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ಈ ವಿಷದ ಕುರಿತು ಈಗಲೇ ಆತುರ ಬೇಡ ಎಂದು
ಹೇಳಿದರು.

ಶಾಸಕ ಮಧುಬಂಗಾರಪ್ಪ ಕೂಡ ಯಡಿಯೂರಪ್ಪ ಕುರಿತು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪರ ಬಗ್ಗೆ ಹೇಳಿಕೆ ನೀಡುವಾಗ ಮಧು ಯೋಚಿಸಬೇಕು. ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಒಮ್ಮೆ ದಂಡುಪಾಳ್ಯ ಗ್ಯಾಂಗ್‌ನೊಂದಿಗೆ ಹೋರಾಟ ಮಾಡಿದ್ದನ್ನು ಬಿಟ್ಟು ಯಾವ ಅನುಭವವೂ ಅವರಿಗಿಲ್ಲ ಎಂದು ಛೇಡಿಸಿದರು. ಚುನಾವಣೆಯಲ್ಲಿ ಬಂಗಾರಪ್ಪ ನಮಗೆ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಎಂದೂ
ಅವರು ಹಗುರವಾಗಿ ಮಾತನಾಡಿದ ಉದಾಹರಣೆ ಇಲ್ಲ. ಅಸಭ್ಯ ಭಾಷೆಯನ್ನು ಬಳಸಲಿಲ್ಲ. ಅವರ ಮಗನಾಗಿ ಕಚಡ
ಬುದ್ಧಿ ಮಧು ಬಂಗಾರಪ್ಪಗೆ ಏಕೆ ಬಂತೋ ಗೊತ್ತಿಲ್ಲ. ದೊಡ್ಡವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದ್ದಾರೆ. ಸ್ವಂತ ವ್ಯಕ್ತಿತ್ವವನ್ನೇ ಹೊಂದಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹಿಂದೆ ಬಂಗಾರಪ್ಪ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧು ಬಂಗಾರಪ್ಪ ತನ್ನ ತಂದೆಯನ್ನೇ
ಅನಾಥವಾಗಿ ಬಿಟ್ಟು ಹೊರ ನಡೆದಿದ್ದರು. ಚುನಾವಣೆ ಸಂದರ್ಭದಲ್ಲಿ ಬಂಗಾರಪ್ಪ ಪರ ಪ್ರಚಾರಕ್ಕೆ ಬಂದ ನೆನಪು ಇಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನೇ ಚುನಾವಣಾ ಪ್ರಚಾರಕ್ಕೆ ಕರೆ ತಂದು ಇಂತಹ ವ್ಯಕ್ತಿಗೆ ಯಡಿಯೂರಪ್ಪರ ಕುರಿತು ಹೇಳಿಕೆ ನೀಡುವ ಅರ್ಹತೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು. ಇದೀಗ ರೈತರ ಪರ ಹೇಳಿಕೆ
ನೀಡತೊಡಗಿದ್ದಾರೆ. ಮಧು ಬಂಗಾರಪ್ಪಗೆ ರೈತರ ಪರವಾಗಿ ಹೇಳಿಕೆ ನೀಡುವ ಯಾವುದೇ ನೈತಿಕತೆ ಇಲ್ಲ. ಶರಾವತಿ
ಡೆಂಟಲ್‌ ಕಾಲೇಜಿನ 80 ಎಕರೆ ಜಾಗ ಯಾರದು? ಆಲ್ಕೊಳದಲ್ಲಿರುವ 87 ಎಕರೆ ಜಾಗ ಯಾರದು ಎಂಬುದನ್ನು ಹೇಳಬೇಕು. ಡಿನೋಟಿಫೈ ಮಾಡಿದ ಜಾಗವನ್ನು ರೈತರಿಗೆ ಮೋಸ ಮಾಡಿ ಕರಾರುಪತ್ರ ಮಾಡಿಕೊಂಡಿದ್ದಾರೆ. ಈ ಹಿಂದೆ ಟ್ರಸ್ಟ್‌ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಕುಟುಂಬ ಹೆಸರಿಗೆ ಪಡೆದುಕೊಂಡಿದ್ದಾರೆ. ಟ್ರಸ್ಟ್‌ನಲ್ಲಿದ್ದ ಕಾಗೋಡು ತಿಮ್ಮಪ್ಪ, ಕುಮಾರ್‌ ಬಂಗಾರಪ್ಪ, ಸ್ವಾಮಿರಾವ್‌ ರಂತಹ ಹಿರಿಯರನ್ನು ಇದೇ ಮಧು ಬಂಗಾರಪ್ಪ ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.

Advertisement

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ರುದ್ರೇಗೌಡ, ಪ್ರಮುಖರಾದ ಬಿಳಕಿ ಕೃಷ್ಣಮೂರ್ತಿ, ಡಿ.ಎಸ್‌ ಅರುಣ್‌, ಎಚ್‌.ಸಿ. ಬಸವರಾಜಪ್ಪ,  ರತ್ನಾಕರ ಶೆಣೈ,ಎಸ್‌. ಜ್ಞಾನೇಶ್ವರ್‌, ಧೀರರಾಜ್‌, ಅಣ್ಣಪ್ಪ ಮತ್ತಿತರರು ಇದ್ದರು. 

ಮೇರುನಟ ಡಾ.ರಾಜ್‌ ಕುಮಾರ್‌ ಮನೆಯ ಹೆಣ್ಣುಮಗಳನ್ನು (ಸೊಸೆ) ರಾಜಕೀಯಕ್ಕೆ ಕರೆತಂದು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ ಮಧು ಬಂಗಾರಪ್ಪ, ಚುನಾವಣೆ ಸಂದರ್ಭದಲ್ಲಿ ನಟ ಶಿವರಾಜ್‌ ಕುಮಾರ್‌ರನ್ನು ರಸ್ತೆ ರಸ್ತೆಯಲ್ಲಿ ನಿಲ್ಲಿಸಿ ಕುಣಿಸಿದ್ದಾರೆ. ಅವರ ದುಡ್ಡಿನ ಚೀಲವನ್ನು ಖಾಲಿ ಮಾಡಿಸಿದ ಕೀರ್ತಿ ಮಧುಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಶಿವರಾಜ್‌ ಕುಮಾರ್‌, ಮಧುಬಂಗಾರಪ್ಪರ ಕಡೆ ತಿರುಗಿಯೂ ನೋಡುತ್ತಿಲ್ಲ.
ಆಯನೂರು ಮಂಜುನಾಥ್‌, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next