Advertisement

ಬಿ.ವೈ.ರಾಘವೇಂದ್ರ ಹ್ಯಾಟ್ರಿಕ್‌ಗೆ ಮಧು ವಿಘ್ನ

11:25 PM Apr 19, 2019 | Lakshmi GovindaRaju |

ಶಿವಮೊಗ್ಗ: ಮಾಜಿ ಸಿಎಂ ಕುಡಿಗಳ ಕಾದಾಟದಿಂದ ಹೈವೋಲ್ಟೆಜ್‌ ಕ್ಷೇತ್ರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣಾ ರಾಜಕಾರಣದಲ್ಲಿ ಸೋಲನ್ನೇ ಹೆಚ್ಚು ಕಂಡ ಮಾಜಿ ಸಿಎಂ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಬಿಜೆಪಿಯಿಂದ ಇದುವರೆಗೆ ಸೋಲೇ ಕಾಣದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕೆ ಇಳಿದಿದ್ದಾರೆ.

Advertisement

ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್‌ ಚಿಹ್ನೆಯೇ ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಹೀಗಾಗಿ ಈವರೆಗೆ 10 ಬಾರಿ ಗೆಲುವಿನ ಮಾಲೆ ಧರಿಸಿದ್ದ ಕಾಂಗ್ರೆಸ್‌ಗೆ ಇರಿಸು ಮುರಿಸು ಉಂಟಾದರೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಜೆಡಿಎಸ್‌ಗೆ ಪೂರ್ಣ ಬೆಂಬಲ ನೀಡಿದೆ. ಆದರೆ ಕ್ಷೇತ್ರದ ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ತರಲು ಮುಖಂಡರು ಹರಸಾಹಸ ಪಡಬೇಕಾಗಿದೆ.

ಭದ್ರಾವತಿ ಕ್ಷೇತ್ರದಲ್ಲಿ ಶಾಸಕ ಸಂಗಮೇಶ್‌ ಹಾಗೂ ಮಾಜಿ ಶಾಸಕ ಅಪ್ಪಾಜಿಗೌಡ 25 ವರ್ಷಗಳಿಂದ ಜಿದ್ದಾಜಿದ್ದಿನ ರಾಜಕಾರಣ ನಡೆಸಿದ್ದು ಇಬ್ಬರನ್ನೂ ಒಂದೇ ಹಳಿಗೆ ತರಲು ಮುಖಂಡರಿಗೂ ಸಾಧ್ಯವಾಗುತ್ತಿಲ್ಲ. ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಚಿವ ಡಿ.ಕೆ. ಶಿವಕುಮಾರ್‌ ಭದ್ರಾವತಿಯಲ್ಲಿ 1 ಲಕ್ಷ ಲೀಡ್‌ ಕೊಡಬೇಕೆಂದು ತಾಕೀತು ಮಾಡಿದ್ದರೂ ಯಾವುದೇ ಪರಿಣಾಮ ಬೀರಿಲ್ಲ. ಗ್ರಾಮಾಂತರ ಭಾಗಕ್ಕೆ ಅಭ್ಯರ್ಥಿಯಾದಿಯಾಗಿ ಕಣಕ್ಕೆ ಇಳಿದಿಲ್ಲ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಾವು ಮುಂಗುಸಿಯಂತಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಒಂದೇ ವೇದಿಕೆಗೆ ಬಂದರಾದರೂ ಜೆಡಿಎಸ್‌ ತಾಲೂಕು ಅಧ್ಯಕ್ಷ ಮದನ್‌ ರಾಜೀನಾಮೆ ಹಿನ್ನಡೆ ಅನುಭವಿಸಬೇಕಾಗಿದೆ. ಮಂಜುನಾಥ ಗೌಡ ವಿರುದ್ಧ ಮುನಿಸಿಕೊಂಡಿದ್ದ ಅವರು, ರಾಜೀನಾಮೆ ನೀಡಿ ತಟಸ್ಥರಾಗಿರುವುದಾಗಿ ತಿಳಿಸಿದ್ದರು.

ಆದರೆ ಕೊನೇ ಕ್ಷಣದಲ್ಲಿ ಬಿಜೆಪಿ ಸೇರಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಲೀಡ್‌ ಪಡೆಯಬಹುದು ಎಂದು ಬಿಜೆಪಿ ಮುಖಂಡರು ಅಂದಾಜಿಸಿದ್ದಾರೆ. ಕಿಮ್ಮನೆ ರತ್ನಾಕರ್‌ಗೆ ಚುನಾವಣಾ ಉಸ್ತುವಾರಿ ನೀಡಿದ್ದು ಸೋಲು, ಗೆಲುವಿಗೆ ನೀವೇ ಹೊಣೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಇಷ್ಟು ದಿನ ತೀರ್ಥಹಳ್ಳಿ ಬಿಟ್ಟು ಹೊರಬರದ ಕಿಮ್ಮನೆ ರತ್ನಾಕರ್‌ ಈಗ ಬೇರೆ ತಾಲೂಕಿನಲ್ಲೂ ಪ್ರಚಾರಕ್ಕೆ ಧುಮುಕ್ಕಿದ್ದಾರೆ.

Advertisement

ಬೈಂದೂರು, ಸೊರಬ, ಸಾಗರ, ಶಿಕಾರಿಪುರದಲ್ಲಿ ಹಳ್ಳಿ ಹಳ್ಳಿ ಪ್ರಚಾರ ನಡೆಸಿರುವ ಮಧು ಬಂಗಾರಪ್ಪ ಇನ್ನೂ ಭದ್ರಾವತಿ ಹಾಗೂ ತೀರ್ಥಹಳ್ಳಿಯತ್ತ ಹೆಚ್ಚಿನ ಗಮನ ಹರಿಸಿಲ್ಲ. ಈಡಿಗ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಾಗರದಲ್ಲಿ ಕಾಂಗ್ರೆಸ್‌ ಮುಖಂಡರಲ್ಲಿ ಆಂತರಿಕ ಕಚ್ಚಾಟ ಶುರುವಾಗಿದ್ದು ಮೈತ್ರಿಗೆ ಬಿಸಿ ತುಪ್ಪವಾಗಿದೆ.

ಬಿಜೆಪಿಗೆ ಶಾಸಕರ ಬಲ: ನಾಲ್ಕೈದು ಚುನಾವಣೆಗಳಿಂದ ಜಿಲ್ಲೆಯಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಬಿಜೆಪಿಗೆ 8 ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಶಾಸಕರು ಬಿಜೆಪಿಯವರೇ ಆಗಿರುವುದು ವರದಾನವಾಗಿದೆ. ಬಂಗಾರಪ್ಪ ಬಿಜೆಪಿಗೆ ಬಂದು ವಾಪಸ್‌ ಹೋದ ಮೇಲೆ ಬಿಜೆಪಿಗೆ ಗೆಲುವಿನ ಲಯ ಸಿಕ್ಕಿದೆ. 2009ರಿಂದ ನಿರಂತರವಾಗಿ ಬಿಜೆಪಿ ಸಂಸದರೇ ಆಯ್ಕೆಯಾಗುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿ.ವೈ. ರಾಘವೇಂದ್ರ ಹ್ಯಾಟ್ರಿಕ್‌ ಸಾಧನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಕಣ ಚಿತ್ರಣದ ಹೇಗಿದೆ?: 8 ವಿಧಾನಸಭಾ ಕ್ಷೇತ್ರಗಳ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ. ಶಿಕಾರಿಪುರ, ತೀರ್ಥಹಳ್ಳಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸಾಗರದಲ್ಲಿ ಕಾಂಗ್ರೆಸ್‌, ಭದ್ರಾವತಿಯಲ್ಲಿ ಜೆಡಿಎಸ್‌ ಅ ಧಿಕಾರದಲ್ಲಿದೆ. ಜಿಪಂನಲ್ಲೂ ಬಿಜೆಪಿ ಸದಸ್ಯರು ಹೆಚ್ಚಿದ್ದರೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ.

ಲೋಕಸಭೆಯಲ್ಲಿ ಜೆಡಿಎಸ್‌ ಈವರೆಗೂ ಖಾತೆಯೇ ತೆರೆದಿಲ್ಲ. ಮೊದಲ ಬಾರಿ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಚಿಹ್ನೆಗೆ ಮತ ಕೇಳುತ್ತಿದ್ದಾರೆ. 1952ರಿಂದ 2018ರವರೆಗೆ ನಡೆದ 18 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್‌ ಗೆಲುವು ಕಂಡಿದೆ. ಬಿಜೆಪಿ 5 ಬಾರಿ, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್‌ ಪಕ್ಷ, ಎಸ್‌ಪಿ ತಲಾ ಒಂದು ಬಾರಿ ಪ್ರಭುತ್ವ ಸ್ಥಾಪಿಸಿವೆ.

ಒಟ್ಟು ಮತದಾರರು: 16,47,527
ಪುರುಷರು: 8,18,708
ಮಹಿಳೆಯರು: 8,28,819

ಜಾತಿವಾರು ಮತದಾರರು
ಈಡಿಗ- 3,05,165
ಲಿಂಗಾಯತ – 2,70,182
ಬ್ರಾಹ್ಮಣ – 1,41,680
ಒಕ್ಕಲಿಗ – 1,40,033
ಕುರುಬ – 81,132
ಎಸ್‌ ಸಿ – 2,30,094
ಎಸ್‌ ಟಿ – 70,869
ಮುಸ್ಲಿಂ – 1,42,587
ಇತರೆ – 2.20 ಲಕ್ಷ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next