ಶಿವಮೊಗ್ಗ: ಕಡೇ ಕ್ಷಣದಲ್ಲಿ ಮಧು ಬಂಗಾರಪ್ಪ ಅಭ್ಯರ್ಥಿ ಆಗಿರುವುದು ದೇವರ ಆಟವೇ ಆಗಿದೆ. ಹೀಗಾಗಿ, ಇದು ಹುಡುಗಾಟದ ಚುನಾವಣೆ ಅಲ್ಲ. ದೇವರ ಆಟದ ಚುನಾವಣೆ. ಸರ್ಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತೆ ಎಂದು ಗೊಂದಲ ಸೃಷ್ಟಿಸುತ್ತಿರುವವರಿಗೆ ಈ ಚುನಾವಣೆ ತಕ್ಕ ಉತ್ತರ ನೀಡಲಿದೆ. ಹರಕೆಯ ಕುರಿ ಯಾರಾಗುತ್ತಾರೆ ಎಂಬುದು ಚುನಾವಣೆ ಮುಗಿದ ನಂತರ ಎಲ್ಲರಿಗೂ ತಿಳಿಯಲಿದೆ ಎಂದು ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶ ಬಿಜೆಪಿ ನಾಯಕರ ಟೀಕೆಗೆ ಉತ್ತರ ನೀಡಲಿದೆ. ಮುಂಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದ್ದು ಕನಿಷ್ಠ 25ರಿಂದ 26 ಸ್ಥಾನಗಳನ್ನು ಗೆಲ್ಲುವ ಗುರಿ ಇದೆ. ಈ ಉಪ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.
ಪ್ರತಿ ವ್ಯಕ್ತಿಗೂ ಹೋರಾಟ ಅನ್ನುವುದು ರಕ್ತಗತವಾಗಿ ಬಂದಿರುತ್ತದೆ. ಸೋಲನ್ನೇ ಕಾಣದ ಬಂಗಾರಪ್ಪ ಅವರ ಕೊನೇ ದಿನಗಳಲ್ಲಿ ಸೋಲು ಕಂಡಿದ್ದಾರೆ. ದೇವೇಗೌಡರು ಮೂರು ಬಾರಿ ಸೋತಿದ್ದಾರೆ. ಮಧು ಬಂಗಾರಪ್ಪ ನಿಲ್ಲಬೇಕೆಂದು ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ತೀರ್ಮಾನ ಕೈಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಲ್ಲಿಸಬೇಕೆಂದು ನಾವು ಹಠ ಹಿಡಿದಿರಲಿಲ್ಲ ಎಂದರು.
ನಾನು ಹಾಗೆ ಹೇಳೇ ಇಲ್ಲ: ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾಕ್ಕೆ ನರೇಂದ್ರ ಮೋದಿ ವಿರೋಧ ಮಾಡಿದ್ದಾರೆಂದು ನಾನು ಹೇಳೇ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆ ಹಲವಾರು ಸುತ್ತಿನ ಮಾತುಕತೆ ನಡೆಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಯಾವ್ಯಾವ ರೈತರು ಎಷ್ಟೆಷ್ಟು ಸಾಲ ಪಡೆದಿದ್ದಾರೆಂದು ಕೇಳಿ ಒಂದು ತಿಂಗಳಾಗಿದೆ. ದುಡ್ಡು ರೆಡಿ ಮಾಡಿ ಆಗಿದೆ, ಬನ್ನಿ ಎಂದರೂ ಬರುತ್ತಿಲ್ಲ. ಇನ್ನೂ ಅಂಕಿ-ಅಂಶ ನೀಡಿಲ್ಲ. ಆದರೆ, ಸಾಲಮನ್ನಾ ಮಾಡೇ ಇಲ್ಲ, ಸರಕಾರ ದುಡ್ಡು ಕೊಟ್ಟೇ ಇಲ್ಲ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾಕ್ಕಾಗಿ 6, 500 ಕೋಟಿ ಮೀಸಲಿಡಲಾಗಿದೆ. ಕೆಲವರು ರೈತ ವಿರೋಧಿ ನಡವಳಿಕೆಯನ್ನು ವ್ಯವಸ್ಥಿತವಾಗಿ ಪ್ರದರ್ಶಿಸುತ್ತಿದ್ದಾರೆ. ಅದು ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕಿದೆ ಎಂದರು.
ಕಾಗೋಡು ತಿಮ್ಮಪ್ಪನವರು ರಾಜ್ಯದ ಹಿರಿಯ ಸಜ್ಜನ ರಾಜಕಾರಣಿ. ಹಲವು ಹೋರಾಟ ಗಳಲ್ಲಿ ಪಾಲ್ಗೊಂಡವರು. ಅವರ ಆಶೀರ್ವಾದ ನಮಗೆ ಸಿಕ್ಕಿರುವುದು ಪುಣ್ಯ. ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆಯುತ್ತದೆ. 2019ರ ಲೋಕಸಭಾ ಚುನಾವಣೆಗೆ
ಪರ್ಯಾಯ ಶಕ್ತಿ ಇಲ್ಲಿಂದಲೇ ಆರಂಭವಾಗುತ್ತದೆ.
● ಎಚ್.ಡಿ.ಕುಮಾರಸ್ವಾಮಿ, ಸಿಎಂ
ಮಧು ಬಂಗಾರಪ್ಪ ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸುತ್ತೇವೆ. ಅವರು ಗೆಲ್ಲಬೇಕು. ಗೆಲ್ಲುತ್ತಾರೆ.
● ಕಾಗೋಡು ತಿಮ್ಮಪ್ಪ .ಮಾಜಿ ಸಚಿವ