ಬೆಂಗಳೂರು: ಅನುಮಾನಾಸ್ಪದವಾಗಿ ಸಾವಿಗೀಡಾದ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಮಧುಗೆ ನ್ಯಾಯ ಸಿಗಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಇದಕ್ಕೆ ಚಿತ್ರರಂಗದ ಮಂದಿ ಕೂಡ ಕೈ ಜೋಡಿಸಿದ್ದಾರೆ.
ಮಧು ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಿನಿಮಾ ಮಂದಿ,
“ಜಸ್ಟೀಸ್‌ಫಾರ್‌ಮಧು’ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್, ನಟಿಯರಾದ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ, ನಟ ನೀನಾಸಂ ಸತೀಶ್ ಸೇರಿದಂತೆ ಇನ್ನು ಅನೇಕರು ಅನ್ಯಾಯದ ವಿರುದ್ಧ ಗುಡುಗಿದ್ದಾರೆ.
“ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಇಂಥ ಘೋರ ಕೃತ್ಯವೆಸಗಿದವರಿಗೆ ಈಗಲೇ ಶಿಕ್ಷೆಯಾಗಬೇಕು. ರಾಯಚೂರಿನ ಜನರೊಂದಿಗೆ ನಾನಿದ್ದೇನೆ’ ಎಂದು ನಟಿ ಹರ್ಷಿಕಾ ಪೂಣಚ್ಚ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ನಟ ನೀನಾಸಂ ಸತೀಶ್, “ಮನುಷ್ಯ ಕುಲವೇ ತಲೆ ತಗ್ಗಿಸುವಂಥ ಕೆಲಸ ಮಾಡಿದ ನೀಚರಿಗೆ ಸರಿಯಾದ ಶಿಕ್ಷೆ ಆಗಲಿ. ನ್ಯಾಯ ಸಿಗಲಿ ಮಧು ಅವರಿಗೆ’ ಎಂದಿದ್ದಾರೆ. ಇನ್ನು ನಟಿ ರಕ್ಷಿತಾ ಪ್ರೇಮ್, “ಇಂಥ ಘಟನೆ ನಡೆದಿದೆ ಎಂದು ಕೇಳಿದಾಗಲೇ ಕೋಪ, ಅಸಹನೆ ಬರುತ್ತದೆ. ಇಂತಹ ಘಟನೆಗಳು ಮರುಕಳಿಸಬಾರದು. ಈ ಬಾರಿಯಾದರೂ ನ್ಯಾಯ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕೂಡ ಟ್ವಿಟರ್ ಮೂಲಕ, ಮಧುಗೆ ನ್ಯಾಯ ಸಿಗಬೇಕು ಎಂದಿದ್ದಾರೆ. “ಈ ಘಟನೆ ನನ್ನ ಹೃದಯ ಒಡೆಯುವಂತೆ ಮಾಡಿದೆ. ಇಂಥ ಕೃತ್ಯಗಳಿಗೆ ಇನ್ನೂ ಎಷ್ಟು ಮಂದಿ ಬಲಿಯಾಗಬೇಕು. ಮಧುಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ’ ಎಂದಿದ್ದಾರೆ.
ಮೇಣದ ಬತ್ತಿ ಹಚ್ಚಿ ಪ್ರತಿಭಟನೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಮಧು ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದೆ. ಶುಕ್ರವಾರ ಸಂಜೆ ಮಂಡಳಿಯಲ್ಲಿ ಮೇಣದ ಬತ್ತಿ ಹಚ್ಚಿ, ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಡಳಿ ಆಗ್ರಹಿಸಿದೆ.