ಚಡಚಣ: ಇಂಚಗೇರಿ ಮಠವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಠವಾಗಿದ್ದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಡಾ| ಮಹಾಂತೇಶ ದಾನಮ್ಮನವರ ಹೇಳಿದರು. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಗುರುಗಳಾಗಿದ್ದ ಹುಬ್ಬಳ್ಳಿಯ ಮಹಾದೇವಪ್ಪ ಮುರಗೋಡ (ಮಾಧವಾನಂದ ಪ್ರಭುಜಿ) ಅವರಿಗೆ ಗೌರವ ಸಲ್ಲಿಸಲು ಇಂಚಗೇರಿ ಮಠದಲ್ಲಿ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆರಳೆಣಿಕೆ ಮಠಗಳು ಇದ್ದವು. ಅದರಲ್ಲಿ ಇಂಚಗೇರಿ ಮಠವು ಒಂದು ಶ್ರೀಮಠದ ಆಗಿನ ಗುರುಗಳಾಗಿದ್ದ ಹುಬ್ಬಳ್ಳಿಯ ಮಹಾದೇವಪ್ಪ ಮುರಗೋಡ (ಮಾಧವಾನಂದ ಪ್ರಭುಜಿ) ಅಧ್ಯಾತ್ಮ ತತ್ವ ಬೋಧನೆ ಮಾಡುತ್ತಿದ್ದರು. ತಮ್ಮ ಮುಂದಾತ್ವದಲ್ಲಿ ಸಹಸ್ರಾರು ಭಕ್ತ ಜನರನ್ನು ಹುರಿದುಂಬಿಸಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದ್ದರು. ಅಲ್ಲದೇ ತಾವು ಕೂಡಾ ಅದರ ಮುಂದಾಳತ್ವ ವಹಿಸಿದ್ದರು.
ಸಾವಳಗಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು. ನಿಂಬಾಳ ರೈಲ್ವೆ ಹಳಿ ಕಿತ್ತೆಸೆದರು. ರಾಜ್ಯದ ಅಥಣಿ ತಾಲೂಕಿನ ಕೊಟ್ಟಲಗಿ ಮತ್ತು ಮಹಾರಾಷ್ಟ್ರದ ಜತ್ತ ತಾಲೂಕಿನ ಸೊನ್ಯಾಳ ಬಂದುಕು ತಯಾರಿಕೆ ಕಾರ್ಖಾನೆ ತೆಗೆದು ಉಗ್ರ ಹೋರಾಟಕ್ಕೆ ಅಣಿಯಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ಹೋರಾಟ ಮಾಡಿದ್ದ ಅವರು 27 ಸಲ ಜೈಲು ವಾಸ ಅನುಭವಿಸಿದ್ದರು ಎಂದು ಸ್ಮರಿಸಿದರು.
ಇಂಚಗೇರಿ ಮಠ ಮಠದ ಪೀಠಾಧಿಪತಿ ರೇವಣಸಿದ್ದೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಮಾಧವಾನಂದ ಪ್ರಭುಜಿಯವರು ಅಧ್ಯಾತ್ಮ ಪ್ರಚಾರಕ್ಕಷ್ಟೇ ಸೀಮಿತವಾಗದೇ ತಮ್ಮ ಅಪಾರ ಭಕ್ತ ವೃಂದದೊಂದಿಗೆ ದೇಶ ಸೇವೆ ಈಶ ಸೇವೆ ಎಂಬ ಮಂತ್ರದೊಂದಿಗೆ ಹುಬ್ಬಳ್ಳಿ, ಹಿಪ್ಪರಗಿ, ಇಂಚಗೇರಿ ಮುಂತಾದ ಕಡೆಗಳಲ್ಲಿ ಸಂಚರಿಸಿ ಮಿಂಚಿನ ಹೋರಾಟ ನಡೆಸಿದ್ದಾರೆ ಎಂದರು.
ಇಂದಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ, ಅಧ್ಯಾತ್ಮ-ಧಾರ್ಮಿಕ ತತ್ವ, ಚಿಂತನೆ ಕಡಮೆಯಾಗುತ್ತಿರುವುದು ಅಸಮಾಧಾನದ ಸಂಗತಿ ಎಂದ ಅವರು, ಎಲ್ಲರಲ್ಲೂ ದೇಶ ಪ್ರೇಮ ತುಂಬುವ ಕಾರ್ಯ ಮಾಡಬೇಕಾದ ಅಗತ್ಯವಿದೆ ಎಂದರು. ಜಮಖಂಡಿಯ ಬಸವ ಪಪೂ ಕಾಲೇಜು ಪ್ರಾಚಾರ್ಯ ಡಾ| ಟಿ.ಪಿ.ಗಿರಡ್ಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಇಂಚಗೇರಿ ಮಠ ಮತ್ತು ಮುರಗೋಡ ಮಹಾದೇವಪ್ಪನವರ ಪಾತ್ರದ ಕುರಿತು ವಿವರಿಸಿದರು.
ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಚಡಚಣ ತಹಶೀಲ್ದಾರ್ ಎಚ್.ಎನ್. ಶಿರಹಟ್ಟಿ, ವಿಠಲ ರಾಠೊಡ, ಪ್ರವೀಣ ಪಾಟೀಲ, ಪತ್ರಕರ್ತರಾದ ಷಡಕ್ಷರಿ ಕಂಪುವರ, ಟಿ.ಕೆ. ಮಲಗೊಂಡ, ಮುಕುಂದ ಬೆಳಗಲಿ ಹಾಗೂ 120ಕ್ಕೂ ಅಧಿಕ ಕಲಾವಿದರು ಶಾಲಾ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸುತ್ತಲಿನ ಗ್ರಾಮಗಳ ಸಹಸ್ರಾರು ಜನ ಪಾಲ್ಗೊಂಡಿದ್ದರು. ಬಿ.ನಾಗರಾಜ ಸ್ವಾಗತಿಸಿದರು. ಸಂಗೀತಾ ಮಠಪತಿ ನಿರೂಪಿಸಿದರು.